ಊಹೆಯ ಆಧಾರದಲ್ಲಿ ಪೈಲಟ್ ಗಳನ್ನು ಟೀಕಿಸಬಾರದು: ಐಸಿಪಿಎ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದ ತಿಂಗಳು ಅಪಘಾತಕ್ಕೀಡಾದ ಏರ್ ಇಂಡಿಯಾ 171 ವಿಮಾನದ ಸಿಬ್ಬಂದಿ ಸವಾಲಿನ ಪರಿಸ್ಥಿತಿಗಳನ್ನು ಎದುರಿಸುವ ತಮ್ಮ ತರಬೇತಿ ಹಾಗೂ ಜವಾಬ್ದಾರಿಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದ್ದಾರೆ. ಊಹೆಯ ಆಧಾರದ ಮೇಲೆ ಪೈಲಟ್ ಗಳನ್ನು ಟೀಕಿಸಬಾರದು ಎಂದು ಭಾರತೀಯ ವಾಣಿಜ್ಯ ಪೈಲಟ್ಗಳ ಸಂಘಟನೆ (ಐಸಿಪಿಎ) ಹೇಳಿದೆ.
‘ಪೈಲಟ್ ಆತ್ಮಹತ್ಯೆ’ ಮಾಡಿಕೊಂಡಿರುವ ಆರೋಪವನ್ನು ಬಲವಾಗಿ ತಿರಸ್ಕರಿಸಿರುವ ಏರ್ ಇಂಡಿಯಾದ ಸಣ್ಣ ವಿಮಾನಗಳ ಪೈಲಟ್ಗಳನ್ನು ಪ್ರತಿನಿಧಿಸುವ ಸಂಘಟನೆ (ಟಾಟಾ ಸಮೂಹ ಮಾಲಕತ್ವದ ಏರ್ ಇಂಡಿಯಾದಲ್ಲಿ ಸಣ್ಣ ವಿಮಾನಗಳ ಪೈಲಟ್ ಗಳ ಸಂಘಟನೆ ಐಸಿಪಿಎ), ಅಧಿಕೃತ ತನಿಖೆ ಪೂರ್ಣಗೊಳ್ಳುವ ವರೆಗೆ ಹಾಗೂ ಅಂತಿಮ ವರದಿ ಪ್ರಕಟವಾಗುವ ವರೆಗೆ ಯಾವುದೇ ಊಹಾಪೋಹಗಳು ಸ್ವೀಕಾರಾರ್ಹವಲ್ಲ. ಅದನ್ನು ಖಂಡಿಸಬೇಕು ಎಂದಿದೆ.
ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಯು ಪೈಲಟ್ ಗಳ ಬಗ್ಗೆ ಪಕ್ಷಪಾತದ ಧೋರಣೆ ಅನುಸರಿಸಿದೆ ಎಂದು ಶನಿವಾರ ಹೇಳಿರುವ ಏರ್ ಲೈನ್ಸ್ ಪೈಲಟ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ದುರಂತದ ಕುರಿತು ನ್ಯಾಯಯುತ ಹಾಗೂ ಸತ್ಯ ಆಧಾರಿತ ತನಿಖೆ ನಡೆಸುವಂತೆ ಆಗ್ರಹಿಸಿರುವುದನ್ನು ಅದು ಇಲ್ಲಿ ಉಲ್ಲೇಖಿಸಿದೆ.
260 ಜನರ ಸಾವಿಗೆ ಕಾರಣವಾದ ಜೂನ್ 12ರಂದು ಸಂಭವಿಸಿದ ಬೋಯಿಂಗ್ 787-8 ವಿಮಾನ ಅಪಘಾತದ ಕುರಿತ ತನ್ನ ಪ್ರಾಥಮಿಕ ವರದಿಯನ್ನು ವಿಮಾನ ಅಪಘಾತ ತನಿಖಾ ಬ್ಯುರೋ (ಎಎಐಬಿ) ಶನಿವಾರ ಬಿಡುಗಡೆ ಮಾಡಿತ್ತು.







