ಕಡಿಮೆ ಗೋಚರತೆಯಲ್ಲಿ ಲ್ಯಾಂಡಿಂಗ್ ಮಾಡಲು ತಿಳಿಯದ ಪೈಲಟ್ ಗಳು, 2 ವಿಮಾನ ಸಂಸ್ಥೆಗಳಿಗೆ ನೋಟಿಸ್!

Photo: PTI
ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯ ಸಮಯದಲ್ಲಿ ಲ್ಯಾಂಡಿಂಗ್ ಮಾಡಲು ಸಿಎಟಿ III ತಂತ್ರಜ್ಞಾನ ಬಳಸಲು ಅರಿವಿಲ್ಲದ ಪೈಲಟ್ ಗಳನ್ನು ನಿಯೋಜಿಸಿದ್ದ ಎರಡು ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಗುರುವಾರ ನೋಟಿಸ್ ನೀಡಿದೆ. ಏರ್ ಇಂಡಿಯಾ ಮತ್ತು ಸ್ಪೈಸ್ಜೆಟ್ ವಿಮಾನ ಸಂಸ್ಥೆಗಳ ಪೈಲಟ್ ಗಳಿಗೆ ಕಡಿಮೆ ಗೋಚರತೆ ಸಮಯದಲ್ಲಿ ವಿಮಾನ ಇಳಿಸುವ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದಿರುವುದರಿಂದ ಡಿಸೆಂಬರ್ ಅಂತ್ಯಕ್ಕೆ ದಟ್ಟ ಮಂಜಿನ ಸಂದರ್ಭ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ತೊಂದರೆಯಾಗಿತ್ತು. ಹಲವು ವಿಮಾನಗಳು ಮಾರ್ಗ ಬದಲಿಸಬೇಕಾಗಿ ಬಂದಿತ್ತು ಎಂದು ndtv ವರದಿ ಮಾಡಿದೆ.
“ದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಮಾರ್ಗಬದಲಿಸಬೇಕಾಗಿ ಬಂದ ಘಟನೆ ಇದಾಗಿತ್ತು. ಹಾಗಾಗಿ ಡಿಜಿಸಿಎ ಕ್ರಮಕೈಗೊಳ್ಳಲು ಮುಂದಾಗಿದೆ. ಪೈಲಟ್ಗಳಿಗೆ ಕಡಿಮೆ ಗೋಚರತೆ ಸಮಯದಲ್ಲಿ ಟೇಕ್ ಆಫ್ ಅಥವಾ ಲ್ಯಾಂಡ್ ಮಾಡಲು ತರಬೇತಿ ನೀಡದಿರುವ ಲೋಪ ಡಿಜಿಸಿಎ ಗಮನಕ್ಕೆ ಬಂದಿದೆ. ಈ ಲೋಪದ ಕುರಿತು ಹದಿನೈದು ದಿನಗಳೊಳಗೆ ಉತ್ತರಿಸಲು ವಿಮಾನಯಾನ ಸಂಸ್ಥೆಗಳಿಗೆ ತಿಳಿಸಲಾಗಿದೆ, ”ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 26 ರಂದು, ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಗೋಚರತೆಯು 50 ಮೀಟರ್ ವರೆಗೆ ಮಾತ್ರ ಇತ್ತು. ಇದು ವಿಮಾನ ಹಾರಾಟದ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಿತು. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, 50 ಮೀಟರ್ ಗೋಚರತೆಯನ್ನು ಶೂನ್ಯ ಗೋಚರತೆ ಎಂದು ಪರಿಗಣಿಸಲಾಗುತ್ತದೆ. ಅಂದು ಬೆಳಿಗ್ಗೆ 8.30ಕ್ಕೆ 75 ಮೀಟರ್ ಇದ್ದ ಗೋಚರತೆಯು, ಮತ್ತೆ 50 ಮೀಟರ್ಗೆ ಇಳಿಯಿತು. ಇದು ವಿಮಾನ ಸಂಚಾರಕ್ಕೆ ತೊಂದರೆಯಾಯಿತು ಎಂದು ತಿಳಿದು ಬಂದಿದೆ.
"ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಗಳು ಮುಂದುವರಿದರೂ, CAT III ತಂತ್ರಜ್ಞಾನ ಬಳಸದ ವಿಮಾನಗಳ ಮೇಲೆ ಪರಿಣಾಮ ಬೀರಬಹುದು. ಪ್ರಯಾಣಿಕರು ವಿಮಾನಗಳ ಇತ್ತೀಚಿನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ತೀವ್ರವಾಗಿ ವಿಷಾದಿಸುತ್ತೇವೆ" ಎಂದು ದೆಹಲಿ ವಿಮಾನ ನಿಲ್ದಾಣದ ಸಲಹಾ ವಿಭಾಗವು ಪ್ರಯಾಣಿಕರಿಗೆ ಸಲಹೆ ನೀಡಿತ್ತು.
ವಿಮಾನ ನಿಲ್ದಾಣವು ದಟ್ಟ ಮಂಜಿನ ಸಂದರ್ಭದಲ್ಲಿಯೂ ವಿಮಾನವನ್ನು ಲ್ಯಾಂಡಿಂಗ್ – ಟೇಕಾಫ್ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದನ್ನು ತಾಂತ್ರಿಕವಾಗಿ CAT-III ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಎಂದು ಕರೆಯಲಾಗುತ್ತದೆ. CAT III ವ್ಯವಸ್ಥೆಯು ರನ್ವೇ ಗೋಚರತೆಯ ಮಟ್ಟವು ಕುಸಿದಾಗ ನಿಖರವಾಗಿ ರನ್ ವೇ ಗುರುತಿಸುವ ಮೂಲಕ ಲ್ಯಾಂಡಿಂಗ್ ಮಾಡಲು ಸಹಾಯ ಮಾಡುತ್ತದೆ.







