ಸೇನೆಗೆ ಪಿನಾಕಾ ಬಲ ; 6400 ರಾಕೆಟ್ ಗಳ ಖರೀದಿಗೆ 2800 ಕೋಟಿ ರೂ.ಯೋಜನೆಗೆ ಕೇಂದ್ರದ ಅಸ್ತು
Photo: PTI
ಹೊಸದಿಲ್ಲಿ: ಭಾರತೀಯ ಸೇನೆಯ ಬಲವರ್ಧನೆಗೆ ಉತ್ತೇಜನ ನೀಡುವ ಮಹತ್ವದ ನಡೆಯೊಂದರಲ್ಲಿ ರಕ್ಷಣಾ ಸಚಿವಾಲಯವು ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಗಳಿಗೆ ಸುಮಾರು 6400 ರಾಕೆಟ್ ಗಳ ಖರೀದಿಗಾಗಿ 2800 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ರಕ್ಷಣಾ ಸಚಿವಾಲಯದ ರಕ್ಷಣಾ ಖರೀದಿ ಮಂಡಳಿಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಏರಿಯಾ ಡಿನೈಯಲ್ ಟೈಪ್ 2 ಹಾಗೂ ಟೈಪ್3 ಎಂದು ಕರೆಯಲಾಗುವ ಎರಡು ವಿಧದ ರಾಕೆಟ್ ಗಳನ್ನು ಖರೀದಿಸುವ ಪ್ರಸ್ತಾವನೆಗೆ ತನ್ನ ಅನುಮೋದನೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ರಾಕೆಟ್ ಗಳನ್ನು ಭಾರತೀಯ ಸೇನೆಯು ಸ್ವದೇಶಿ ಮೂಲಗಳಿಂದಲೇ ಖರೀದಿಸಲಿದೆ. ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯ ಇಕಾನಾಮಿಕ್ ಎಕ್ಸ್ ಪ್ಲೋಸಿವ್ ಲಿಮಿಟೆಡ್ ಹಾಗೂ ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಖಾನೆಗಳ ಕಾರ್ಪೊರೇಟೀಕರಣದ ಬಳಿಕ ಸೃಷ್ಟಿಯಾದ ಮದ್ದುಗುಂಡು ತಯಾರಕ ಕಂಪೆನಿಗಳಲ್ಲೊಂದಾದ ‘ಮ್ಯೂನಿಶನ್ಸ್ ಇಂಡಿಯಾ ಲಿಮಿಟೆಡ್’ , ರಾಕೆಟ್ ಗಳ ತಯಾರಿಗೆ ಬಿಡ್ ಸಲ್ಲಿಸಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಪಿನಾಕಾ ಮಲ್ಟಿಬ್ಯಾರಲ್ ರಾಕೆಟ್ ಉಡಾವಣಾ ವ್ಯವಸ್ಥೆಯು, ಆರ್ಮೇನಿಯಾ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಿಗೆ ರಫ್ತಾಗಿರುವ ಕೆಲವೇ ಕೆಲವು ಭಾರತೀಯ ಸೇನಾ ಉಪಕರಣಗಳಲ್ಲೊಂದಾಗಿದೆ.
ಪಿನಾಕಾ ರಾಕೆಟ್ಲಾಂಚರ್ ಯೋಜನೆಯಲ್ಲಿ ಲಾರ್ಸೆನ್ ಆ್ಯಂಡ್ ಟಬ್ರೋ, ಟಾಟಾ ಡಿಫೆನ್ಸ್ ಹಾಗೂ ಇಕನಾಮಿಕ್ ಎಕ್ಸ್ ಪ್ಲೋಸಿವ್ ಲಿಮಿಟೆಡ್ ಸಂಸ್ಥೆಗಳು ಪಾಲ್ಗೊಂಡಿದ್ದು, ಅವು ಯೋಜನೆಗೆ ಬೇಕಾದ ವಿವಿಧ ಪರಿಕರಗಳನ್ನು ಉತ್ಪಾದಿಸುತ್ತವೆ.