ಇರಾನ್ ಮೇಲಿನ ದಾಳಿ | ಇಸ್ರೇಲ್ ಜಾಗತಿಕ ಠಕ್ಕನಂತೆ ವರ್ತಿಸುತ್ತಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್ ಕಟು ಟೀಕೆ

ಕೇರಳ ಸಿಎಂ ಪಿಣರಾಯಿ ವಿಜಯನ್ | PC : PTI
ತ್ರಿಶೂರ್: ಇಂದು ಇರಾನ್ನ ರಾಜಧಾನಿ ಟೆಹರಾನ್ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ವಾಯು ದಾಳಿ ನಡೆಸಿರುವ ಇಸ್ರೇಲ್ ಕ್ರಮವನ್ನು ಕಟುವಾಗಿ ಖಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಇಸ್ರೇಲ್ ಸುದೀರ್ಘ ಕಾಲದ ಜಾಗತಿಕ ಠಕ್ಕ" ಎಂದು ವಾಗ್ದಾಳಿ ನಡೆಸಿದ್ದಾರೆ. ಇಸ್ರೇಲ್ ಅಮೆರಿಕದದ ಬೆಂಬಲ ಸ್ವೀಕರಿಸುತ್ತಿರುವುದರಿಂದ ಅದು ಹಾಗೆ ವರ್ತಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ತ್ರಿಶೂರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಮೇಲಿನ ದಾಳಿಯನ್ನು ಖಂಡಿಸಿದರಲ್ಲದೆ, ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸುತ್ತಿರುವ ಉದ್ವಿಗ್ನ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. "ಇಸ್ರೇಲ್ ಜಾಗತಿಕ ಠಕ್ಕನಂತೆ ಸುದೀರ್ಘ ಕಾಲದಿಂದ ವರ್ತಿಸುತ್ತಿದೆ. ಅದು ಸಹಜ ಸಭ್ಯತೆಯ ಮಾನದಂಡಗಳು ಹಾಗೂ ಅಂತಾರಾಷ್ಟ್ರೀಯ ನಡತೆಯನ್ನು ಎಂದೂ ಪಾಲಿಸುವುದಿಲ್ಲ" ಎಂದೂ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಶುಕ್ರವಾರ ಮುಂಜಾನೆ ಇರಾನ್ನ ಅಣು ಸ್ಥಾವರಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ ಎಂಬ ವರದಿಗಳಿಗೆ ಪಿಣರಾಯಿ ವಿಜಯನ್ ಈ ಪ್ರತಿಕ್ರಿಯೆ ನೀಡಿದ್ದಾರೆ.





