ವಿಮಾನ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖಾ ಸಮಿತಿ ಸಭೆ; ಸಂಭಾವ್ಯ ಕಾರಣಗಳ ಬಗ್ಗೆ ಚರ್ಚೆ

PC : PTI
ಹೊಸದಿಲ್ಲಿ: ಅಹ್ಮದಾಬಾದ್ ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸಲು ಸರಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸೋಮವಾರ, ದಶಕಗಳಲ್ಲೇ ದೇಶದ ಭೀಕರ ವಿಮಾನ ಅಪಘಾತಕ್ಕೆ ಕಾರಣವಾಗಿರಬಹುದಾದ ವಿವಿಧ ಸಂಭಾವ್ಯ ಕಾರಣಗಳ ಬಗ್ಗೆ ಚರ್ಚೆ ನಡೆಸಿತು.
ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ನೇತೃತ್ವದ ಸಮಿತಿಯು ವಿಮಾನ ಅಪಘಾತದ ಸಂಭಾವ್ಯ ಕಾರಣಗಳ ಬಗ್ಗೆ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಪರಿಣತರ ಅಭಿಪ್ರಾಯಗಳನ್ನು ಆಲಿಸಿತು ಹಾಗೂ ಮುಂದೆ ಇಂಥ ಅಪಘಾತ ನಡೆಯದಂತೆ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿತು ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಂಡವರ ಮೊದಲ ಆದ್ಯತೆಯು ವಿಮಾನ ಅಪಘಾತದ ಸಂಭಾವ್ಯ ಕಾರಣಗಳನ್ನು ವಿಶ್ಲೇಷಿಸುವುದಾಗಿತ್ತು ಹಾಗೂ ಭವಿಷ್ಯದಲ್ಲಿ ಇಂಥ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಮಾದರಿ ಕಾರ್ಯಾಚರಣೆ ವಿಧಾನವನ್ನು ರೂಪಿಸುವುದಾಗಿತ್ತು ಎಂದು ಮೂಲಗಳು ತಿಳಿಸಿವೆ.
ವಿಮಾನ ಅಪಘಾತಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ವಿಶ್ಲೇಷಣೆಗಾಗಿ ವಿಮಾನ ಅಪಘಾತ ತನಿಖಾ ಸಂಸ್ಥೆ ಕೂಡ ಪ್ರತ್ಯೇಕ ತನಿಖೆಯನ್ನು ನಡೆಸುತ್ತಿರುವುದರಿಂದ, ಉನ್ನತ ಮಟ್ಟದ ತನಿಖಾ ಸಮಿತಿಯು, ಸಂಭಾವ್ಯ ಕಾರಣಗಳು ಮತ್ತು ಅವುಗಳಿಂದ ಕಲಿಯಬೇಕಾದ ಪಾಠಗಳ ಬಗ್ಗೆ ಚರ್ಚಿಸಿತು ಎಂದು ಮೂಲಗಳು ಹೇಳಿವೆ.
ಇಂದಿನ ಸಭೆಯಲ್ಲಿ ನಾಗರಿಕ ವಾಯುಯಾನ ಸಚಿವಾಲಯ, ಗೃಹ ಸಚಿವಾಲಯ, ಭಾರತೀಯ ವಾಯು ಪಡೆ, ಇಂಟಲಿಜನ್ಸ್ ಬ್ಯೂರೊ, ಗುಜರಾತ್ ಸರಕಾರ, ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ ಮತ್ತು ನಾಗರಿಕ ವಾಯುಯಾನ ಭದ್ರತಾ ಸಂಸ್ಥೆ ಮುಂತಾದುವುಗಳ ಪ್ರತಿನಿಧಿಗಳು ಭಾಗವಹಿಸಿದರು.







