ಹಕ್ಕಿ ಢಿಕ್ಕಿ: ನಿಲ್ದಾಣಕ್ಕೆ ಹಿಂದಿರುಗಿದ ವಿಮಾನ

ಇಂಡಿಗೊ ವಿಮಾನ | PC : PTI
ನಾಗಪುರ, ಸೆ. 2: ನಾಗಪುರ-ಕೋಲ್ಕತಾ ಇಂಡಿಗೊ ವಿಮಾನ ಮಂಗಳವಾರ ಬೆಳಗ್ಗೆ ಸಂಚಾರ ಆರಂಭಿಸಿದ ಕೂಡಲೇ ಹಕ್ಕಿ ಢಿಕ್ಕಿಯಾದ ಹಿನ್ನೆಲೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
160ರಿಂದ 165 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನ ಮುನ್ನೆಚ್ಚರಿಕೆ ಕ್ರಮವಾಗಿ ನಾಗಪುರ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು ಎಂದು ಅವರು ಹೇಳಿದ್ದಾರೆ.
ಈ ವಿಮಾನದ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ‘‘ನಾಗಪುರದಿಂದ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನ 6ಇ 812 ಸೆಪ್ಟಂಬರ್ 2ರಂದು ಟೇಕ್ ಆಫ್ ಆದ ಕೂಡಲೇ ಹಕ್ಕಿ ಢಿಕ್ಕಿ ಹೊಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಹಿಂದಿರುಗಲು ನಿರ್ಧರಿಸಿದರು. ವಿಮಾನ ನಾಗಪುರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿಯಿತು’’ ಎಂದು ಇಂಡಿಗೊ ಏರ್ಲೈನ್ಸ್ನ ವಕ್ತಾರು ತಿಳಿಸಿದ್ದಾರೆ.
‘‘ವಿಮಾನದ ತಪಾಸಣೆ ಹಾಗೂ ನಿರ್ವಹಣೆಯ ಅಗತ್ಯತೆಯ ಹಿನ್ನೆಲೆಯಲ್ಲಿ ಈ ವಿಮಾನದ ಹಾರಾಟವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ. ನಮ್ಮ ಗ್ರಾಹಕರಿಗೆ ಆಗುವ ಅನಾನುಕೂಲತೆ ಕಡಿಮೆ ಮಾಡಲು ಉಪಹಾರ ನೀಡಿದ್ದೇವೆ, ಪರ್ಯಾಯ ವ್ಯವಸ್ಥೆ/ ಅಥವಾ ರದ್ದತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಪೂರ್ಣ ಮರು ಪಾವತಿ ನೀಡಿದ್ದೇವೆ’’ ಎಂದು ವಕ್ತಾರರು ತಿಳಿಸಿದ್ದಾರೆ.





