ಜಿ-20 ಶೃಂಗಸಭೆಯನ್ನು ಟ್ರಂಪ್ ಬಹಿಷ್ಕರಿಸಿರುವುದರಿಂದ, ಪ್ರಧಾನಿ ಮೋದಿ ಸುರಕ್ಷಿತವಾಗಿ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಗೆ ತೆರಳಿದ ಪ್ರಧಾನಿ ಮೋದಿ (Photo credit: PTI)
ಹೊಸದಿಲ್ಲಿ: ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯನ್ನು ಬಹಿಷ್ಕರಿಸಿರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಅದರಲ್ಲಿ ಸುರಕ್ಷಿತವಾಗಿ ಭಾಗವಹಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದೆ.
ಮುಂದಿನ ಶೃಂಗಸಭೆ ಅಮೆರಿಕದಲ್ಲಿ ನಡೆಯಲಿದ್ದು, ಆ ವೇಳೆಗೆ ತಮ್ಮ ಉತ್ತಮ ಗೆಳೆಯನೊಂದಿಗಿನ ಅಪ್ಪುಗೆಯ ರಾಜತಾಂತ್ರಿಕತೆಗೆ ಅವರು ಮರುಜೀವ ನೀಡುತ್ತಾರೆಯೇ ಕಾದು ನೋಡಬೇಕಿದೆ ಎಂದೂ ಛೇಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಜೊಹಾನ್ಸ್ ಬರ್ಗ್ ಗೆ ಮೂರು ದಿನಗಳ ಪ್ರವಾಸಕ್ಕೆ ತೆರಳಿದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಮುಂದಿನ ಜಿ-20 ಶೃಂಗಸಭೆ ಅಮೆರಿಕದಲ್ಲಿ ನಡೆಯಲಿದ್ದು, ಅಷ್ಟರಲ್ಲಿ ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದ (ಗೋಳು) ಮಾಡಿಕೊಳ್ಳಬಹುದು” ಎಂದು ಕಾಲೆಳೆದಿದ್ದಾರೆ.
“ಆದರೆ, ಕಳೆದ ಏಳು ತಿಂಗಳ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 61 ಬಾರಿ ತಾವು ಆಪರೇಷನ್ ಸಿಂಧೂರ್ ನಿಲ್ಲಿಸಿದ್ದಾಗಿ ಪುನರುಚ್ಚರಿಸಿದ್ದಾರೆ. ಇನ್ನು ಮುಂದಿನ 12 ತಿಂಗಳಲ್ಲಿ ಮತ್ತೆಷ್ಟು ಬಾರಿ ಆ ಮಾತನ್ನು ಪುನರುಚ್ಚರಿಸಬಹುದು ಎಂದು ಊಹಿಸಿ” ಎಂದೂ ಅವರು ಲೇವಡಿ ಮಾಡಿದ್ದಾರೆ.







