ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಬಗ್ಗೆ ಪ್ರಧಾನಿ ಉಲ್ಲೇಖಿಸಿಲ್ಲ : ಸಂಸತ್ತಿನಲ್ಲಿ ಮೋದಿ ಭಾಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂತ್ರಸ್ತನ ಪತ್ನಿ

ಐಶಾನ್ಯಾ ದ್ವಿವೇದಿ (Photo:X/@ANI)
ಕಾನ್ಪುರ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಕುರಿತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶುಭಂ ದ್ವಿವೇದಿ ಅವರ ಪತ್ನಿ ಐಶಾನ್ಯಾ ದ್ವಿವೇದಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ANI ಜೊತೆ ಮಾತನಾಡಿದ ಐಶಾನ್ಯಾ ದ್ವಿವೇದಿ, ಪ್ರಧಾನಿ ಇಂದು ಎಲ್ಲವನ್ನೂ ವಿವರವಾಗಿ ಹೇಳಿದರು. ಆದರೆ, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ 26 ಮಂದಿ ಬಗ್ಗೆ ತನ್ನ ಭಾಷಣದಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಸರಕಾರ ಯಾಕೆ ಏಕೆ ಏನೂ ಮಾಡಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ನಂತರ ʼಆಪರೇಷನ್ ಸಿಂಧೂರ್ʼ ನಡೆಯಿತು. ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದಾಗ ಪ್ರತಿಪಕ್ಷಗಳು ಮತ್ತೆ ಪ್ರಶ್ನಿಸಲು ಪ್ರಾರಂಭಿಸಿದೆ. ಸರಕಾರ ತನ್ನಿಂದ ಸಾಧ್ಯವಾದಷ್ಟು ಎಲ್ಲವನ್ನೂ ಮಾಡುತ್ತಿದೆ. ತನ್ನ ಕಾರ್ಯಗಳನ್ನು ಪದೇ ಪದೇ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ನನಗೆ ಹೆಚ್ಚು ನೋವುಂಟುಮಾಡಿದ ವಿಷಯವೆಂದರೆ ಪ್ರಧಾನಿ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ 26 ಜನರ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂಬುದಾಗಿದೆ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಹಲ್ಗಾಮ್ನಲ್ಲಿ ಮೃತಪಟ್ಟ 26 ಜನರ ಬಗ್ಗೆ ಉಲ್ಲೇಖಿಸಿದರು. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ಆ 26 ಜನರ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅವರು ಪ್ರಸ್ತಾಪಿಸಿಲ್ಲ. ಕದನ ವಿರಾಮವನ್ನು ನಿಲ್ಲಿಸುವುದು ನಮ್ಮ ಸಶಸ್ತ್ರ ಪಡೆಗಳು ಮತ್ತು ಸರಕಾರದ ನಿರ್ಧಾರವಾಗಿರಬೇಕು. ಯಾವುದೇ ಮೂರನೇ ರಾಷ್ಟ್ರವು ಅದರಲ್ಲಿ ಯಾವುದೇ ಪಾತ್ರವನ್ನು ಹೊಂದಿರಬಾರದು. ನಮ್ಮ ದೇಶವು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸಮರ್ಥವಾಗಿದೆ ಎಂದು ಐಶಾನ್ಯಾ ದ್ವಿವೇದಿ ಹೇಳಿದ್ದಾರೆ.







