ಕುಂಟುತ್ತಿರುವ ಪಿಎಂ ಇಂಟರ್ನ್ಶಿಪ್ ಯೋಜನೆ; ಕೇವಲ ಶೇ.4ರಷ್ಟು ಹಣ ಬಳಕೆ: ವರದಿ

Photo Credit : pminternship.mca.gov.in
ಹೊಸದಿಲ್ಲಿ: ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯು (ಪಿಎಂಐಎಸ್) ಯೋಜಿಸಿದಷ್ಟು ಪ್ರಗತಿಯನ್ನು ಸಾಧಿಸಿಲ್ಲ ಎನ್ನುವುದನ್ನು ಸರಕಾರದ ದತ್ತಾಂಶಗಳು ತೋರಿಸಿವೆ. ಯೋಜನೆಗೆ ಹಣವನ್ನು ಒದಗಿಸುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ವಿತ್ತವರ್ಷ 26ರ ಎಪ್ರಿಲ್ ಮತ್ತು ನವಂಬರ್ ನಡುವೆ ತನ್ನ ಬಜೆಟ್ ಹಂಚಿಕೆಯ ಕೇವಲ ಸುಮಾರು ಶೇ.4ರಷ್ಟು ಹಣವನ್ನು ವೆಚ್ಚ ಮಾಡಿದ್ದು,ಇದು ಯೋಜನೆಯ ಸೀಮಿತ ಪ್ರಭಾವವನ್ನು ಎತ್ತಿ ತೋರಿಸಿದೆ ಎಂದು thehindubusinessline.com ವರದಿ ಮಾಡಿದೆ.
ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್ನ ದತ್ತಾಂಶಗಳ ಪ್ರಕಾರ, 11,500 ಕೋಟಿ ರೂ.ಗೂ ಹೆಚ್ಚಿನ ಬಜೆಟ್ ಹಂಚಿಕೆಯಲ್ಲಿ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳುಗಳಲ್ಲಿ 500 ಕೋಟಿ ರೂ.ಗಿಂತ ಕೊಂಚ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದೆ. ಹಂಚಿಕೆಯ ಸುಮಾರು ಶೇ.94ರಷ್ಟನ್ನು ಅಥವಾ 10,800 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಪಿಎಂಐಸ್ಗೆ ಮೀಸಲಿರಿಸಲಾಗಿತ್ತು.
ಇದು ಹೊಸದೇನಲ್ಲ. ವಿತ್ತವರ್ಷ 25ರಲ್ಲಿ ಭಾರೀ ಮೊತ್ತದ ಹಣ ಬಳಕೆಯಾಗದೆ ಉಳಿದ ಬಳಿಕ ಸಚಿವಾಲಯದ ಹಂಚಿಕೆಯನ್ನು 2,667 ಕೋಟಿ ರೂ.ಗಳಿಂದ 1,078 ಕೋಟಿ ರೂ.ಗಳಿಗೆ ತೀವ್ರವಾಗಿ ಕಡಿತಗೊಳಿಸಲಾಗಿತ್ತು. ಮುಖ್ಯವಾಗಿ ಇಂಟರ್ನ್ಶಿಪ್ ಯೋಜನೆಯಡಿ ಕಳಪೆ ಬಳಕೆಯಿಂದಾಗಿ ಹಣವನ್ನು ಮರಳಿಸಲಾಗಿದೆ ಎಂದು ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿತ್ತು. ಆ ವರ್ಷ ವಾಸ್ತವ ವೆಚ್ಚ ಕೇವಲ ಸುಮಾರು 680 ಕೋಟಿ ರೂ.ಆಗಿತ್ತು.
ಯೋಜನೆಯಲ್ಲಿ ಅಭ್ಯರ್ಥಿಗಳ ಸೀಮಿತ ಆಸಕ್ತಿಯನ್ನೂ ಅಧಿಕೃತ ದತ್ತಾಂಶಗಳು ಬೆಟ್ಟು ಮಾಡಿವೆ.
ಡಿ.15,2025ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಪಿಎಂಐಎಸ್ನ ಪ್ರಾಯೋಗಿಕ ಯೋಜನೆಯ ಮೊದಲ ಸುತ್ತಿನಲ್ಲಿ 1.27 ಲಕ್ಷ ಇಂಟರ್ನಶಿಪ್ ಅವಕಾಶಗಳಿಗಾಗಿ 6.21 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಕಂಪನಿಗಳು 82,000ಕ್ಕೂ ಹೆಚ್ಚಿನ ಅವಕಾಶಗಳನ್ನು ಮುಂದಿಟ್ಟಿದ್ದರೂ ಕೇವಲ ಸುಮಾರು 28,000 ಅವಕಾಶಗಳನ್ನು (ಶೇ.34) ಅಭ್ಯರ್ಥಿಗಳು ಸ್ವೀಕರಿಸಿದ್ದರು. 2025, ನ.30ಕ್ಕೆ ಇದ್ದಂತೆ ಕೇವಲ 2,066 ಇಂಟರ್ನ್ಗಳು ತಮ್ಮ ಇಂಟರ್ನ್ಶಿಪ್ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದರು.
ಎರಡನೇ ಸುತ್ತಿನಲ್ಲಿಯೂ ಇದೇ ರೀತಿಯ ಪ್ರವೃತ್ತಿ ಕಂಡು ಬಂದಿದೆ. 1.18 ಲಕ್ಷ ಅವಕಾಶಗಳ ಪೈಕಿ 83,000ಕ್ಕೂ ಅಧಿಕ ಇಂಟರ್ನ್ಶಿಪ್ ಅವಕಾಶಗಳನ್ನು ಅಭ್ಯರ್ಥಿಗಳ ಮುಂದಿರಿಸಲಾಗಿತ್ತಾದರೂ, 24,000ಕ್ಕೂ ಕಡಿಮೆ ಅಭ್ಯರ್ಥಿಗಳು ಸ್ವೀಕರಿಸಿದ್ದರು (ಶೇ.30ಕ್ಕೂ ಕಡಿಮೆ).
ಯಾವುದೇ ಅಧಿಕೃತ ವಿವರಣೆಯನ್ನು ನೀಡಿಲ್ಲವಾದರೂ ಅಲ್ಪ ಪ್ರಮಾಣದ ಆರ್ಥಿಕ ನೆರವು ಅಭ್ಯರ್ಥಿಗಳ ನಿರಾಸಕ್ತಿಗೆ ಕಾರಣವಾಗಿರಬಹುದು ಎಂದು ಸರಕಾರಿ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ಇಂಟರ್ನ್ಗಳು 12 ತಿಂಗಳುಗಳ ಅವಧಿಗೆ ಮಾಸಿಕ 5,000 ರೂ.ಗಳನ್ನು ಪಡೆಯುತ್ತಾರೆ, ಜೊತೆಗೆ 6,000 ರೂ.ಗಳ ಒಂದು ಬಾರಿಯ ಅನುದಾನ ಮತ್ತು ವಿಮೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ.







