ಪ್ರಧಾನಿ ಮೋದಿಯ ಭದ್ರತಾ ಲೋಪ ಪ್ರಕರಣ | 25 ರೈತರಿಗೆ ಬಂಧನಾದೇಶ ಜಾರಿಗೊಳಿಸಿದ ಪಂಜಾಬ್ ನ್ಯಾಯಾಲಯ

ಪ್ರಧಾನಿ ಮೋದಿ | PC : PTI
ಚಂಡಿಗಢ : ಪ್ರಧಾನಿ ನರೇಂದ್ರ ಮೋದಿ ಅವರು 2022ರಲ್ಲಿ ಪಂಜಾಬ್ಗೆ ಭೇಟಿ ನೀಡಿದ ಸಂದರ್ಭ ಭದ್ರತಾ ಲೋಪಕ್ಕೆ ಸಂಬಂಧಿಸಿ ಫಿರೋಝ್ಪುರ ಜಿಲ್ಲೆಯ ನ್ಯಾಯಾಲಯ 25 ರೈತರ ವಿರುದ್ಧ ಬಂಧನಾದೇಶ ಜಾರಿಗೊಳಿಸಿದೆ.
ಈ ರೈತರು ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಹಾಗೂ ಕ್ರಾಂತಿಕಾರಿ ಪೆಂಡು ಮಜ್ದೂರ್ ಯೂನಿಯನ್ನ ಸದಸ್ಯರು.
2022 ಜನವರಿ 5ರಂದು ಮೋದಿ ಅವರು ತನ್ನ ಫಿರೋಝ್ಪುರ ಭೇಟಿಯನ್ನು ರದ್ದುಗೊಳಿಸಬೇಕಾಯಿತು. ಇದು ಭಾರೀ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಫಿರೋಝ್ಪುರ ಜಿಲ್ಲೆಯ ಹುಸೈನಿವಾಲಾ ಗ್ರಾಮದಲ್ಲಿ ಪ್ರತಿಭಟನಕಾರರು ರಸ್ತೆ ಸಂಚಾರಕ್ಕೆ ತಡೆ ಒಡ್ಡಿದ್ದುದರಿಂದ ಪ್ರಧಾನಿ ಅವರ ವಾಹನ ವ್ಯೆಹ ಫ್ಲೈಓವರ್ನಲ್ಲಿ 15 ನಿಮಿಷಕ್ಕೂ ಅಧಿಕ ಕಾಲ ಸಿಲುಕಿಕೊಂಡಿತ್ತು. ಇದು ‘‘ಪ್ರಮುಖ ಭದ್ರತಾ ಲೋಪ’’ ಎಂದು ಕೇಂದ್ರ ಸರಕಾರ ಹೇಳಿತ್ತು.
ಆದರೆ, ಆಗ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನಾಯಕ ಚರಣ್ಜಿತ್ ಸಿಂಗ್ ಚೆನ್ನಿ ಅವರು ಈ ಪ್ರತಿಪಾದನೆಯನ್ನು ನಿರಾಕರಿಸಿದ್ದರು. ಪ್ರಧಾನಿಗೆ ಯಾವುದೇ ಬೆದರಿಕೆ ಇರಲಿಲ್ಲ ಹಾಗೂ ಮೋದಿ ಯೋಜನೆಗಳನ್ನು ಹಠಾತ್ ಬದಲಾಯಿಸಿದ್ದಾರೆ ಎಂದು ಅವರು ಹೇಳಿದ್ದರು.
ಸಾರ್ವಜನಿಕ ಮಾರ್ಗದಲ್ಲಿ ಅಡ್ಡಿ ಪಡಿಸಿದ ಆರೋಪದಲ್ಲಿ 2022 ಜನವರಿ 6ರಂದು ಆರಂಭದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ಆದರೆ, ಈ ಆರೋಪ ‘‘ದುರ್ಬಲ’’ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು.
ಇದು ಮೂವರು ಸದಸ್ಯರ ವಿಶೇಷ ತನಿಖಾ ತಂಡ ರೂಪಿಸಲು ಕಾರಣವಾಯಿತು ಎಂದು ಹೇಳಲಾಗಿದೆ. ತನಿಖೆಯ ಬಳಿಕ ಹತ್ಯೆಗೆ ಯತ್ನ, ಸರಕಾರಿ ಅಧಿಕಾರಿಗೆ ಹಲ್ಲೆ, ತಪ್ಪಾದ ನಿರ್ಬಂಧ ಹಾಗೂ ಕಾನೂನು ಬಾಹಿರ ಸಭೆ ಸೇರುವಿಕೆ ಸೇರಿದಂತೆ ಹೆಚ್ಚುವರಿ ಆರೋಪಗಳನ್ನು ಸೇರಿಸಲಾಯಿತು.
ಈ ಎಫ್ಐಆರ್ನಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ)ನ ಪ್ರಧಾನ ಕಾರ್ಯದರ್ಶಿ ಬಲದೇವ್ ಸಿಂಗ್ ಝಿರಾ ಹಾಗೂ ಇತರ ಯೂನಿಯನ್ನ ಸದಸ್ಯರು ಸೇರಿದಂತೆ 26 ಮಂದಿಯನ್ನು ಹೆಸರಿಸಲಾಗಿತ್ತು. ಆದರೆ, ಯಾರನ್ನೂ ಬಂಧಿಸಿರಲಿಲ್ಲ. ಈ ಪ್ರಕರಣದ ಆರೋಪಿಯಾಗಿರುವ ಮೇಜರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪದೇ ಪದೇ ಸಮನ್ಸ್ ಜಾರಿ ಮಾಡಿದರೂ ಪ್ರಕರಣದ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಫಿರೋಝ್ಪುರ ನ್ಯಾಯಾಲಯ ಜನವರಿ 3ರಂದು ಈ ಹೊಸ ಸಮನ್ಸ್ ಜಾರಿಗೊಳಿಸಿದೆ.







