ಭಯೋತ್ಪಾದಕರಿಗೆ ಪಾಠ ಕಲಿಸುವ ಭರವಸೆ ಈಡೇರಿಸಿದ ಬಳಿಕವೇ ನಾನು ಬಿಹಾರಕ್ಕೆ ಬಂದಿದ್ದೇನೆ: ಪ್ರಧಾನಿ ಮೋದಿ
"ನಮ್ಮ ಸಹೋದರಿಯರ ಸಿಂಧೂರ ನಾಶಪಡಿಸಿದವರ ಅಡಗು ತಾಣವನ್ನು ನಮ್ಮ ಸೈನ್ಯವು ನಾಶಪಡಿಸಿದೆ"

ನರೇಂದ್ರ ಮೋದಿ | PC : X \ @Indianinfoguide
ಪಾಟ್ನಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿ ಜನತೆಗೆ ನೀಡಿದ ಪ್ರತಿಜ್ಞೆಯನ್ನು ಈಡೇರಿಸಿದ ನಂತರವೇ ಬಿಹಾರಕ್ಕೆ ಹಿಂತಿರುಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಬಿಹಾರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಭರವಸೆ ನೀಡಿದಂತೆ ಭಯೋತ್ಪಾದಕರು ಮತ್ತು ಅವರನ್ನು ಪೋಷಿಸುವವರಿಗೆ ಪಾಠವನ್ನು ಕಲಿಸಲಾಗಿದೆ ಎಂದು ಹೇಳಿದರು. ಕಳೆದ ಎಪ್ರಿಲ್ 24ರಂದು ಮಧುಬನಿ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಪಹಲ್ಗಾಮ್ ದಾಳಿಯ ಒಂದು ದಿನದ ನಂತರ ನಾನು ಬಿಹಾರಕ್ಕೆ ಬಂದಿದ್ದೆ. ದಾಳಿಯಲ್ಲಿ ಸಹೋದರಿಯರು ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅಪರಾಧಿಗಳಿಗೆ ಅವರು ಕನಸಿನಲ್ಲಿಯೂ ಯೋಚಿಸದ ರೀತಿಯಲ್ಲಿ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೆ. ಇಂದು ನಾನು ಭರವಸೆಯನ್ನು ಈಡೇರಿಸಿ ಬಿಹಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಆರ್ಜೆಡಿ ಸಾಮಾಜಿಕ ನ್ಯಾಯದ ನೆಪದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳನ್ನು ವಂಚಿಸುತ್ತಿವೆ. ಬಿಹಾರದಲ್ಲಿ INDIA ಒಕ್ಕೂಟ ಮತ್ತೆ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ರೋಹ್ತಾಸ್ ಜಿಲ್ಲೆಯ ಬಿಕ್ರಮ್ಗಂಜ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನವ ಭಾರತ ಶ್ರೀರಾಮನ ತತ್ವಗಳನ್ನು ಪಾಲಿಸುತ್ತಿದೆ. ಪಾಕಿಸ್ತಾನದಲ್ಲಿ ಕುಳಿತು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದವರ ಅಡಗು ತಾಣವನ್ನು ನಮ್ಮ ಸೈನ್ಯವು ನಾಶಪಡಿಸಿದೆ. ಪಾಕಿಸ್ತಾನ ಮತ್ತು ಜಗತ್ತಿಗೆ ಸಿಂಧೂರದ ಶಕ್ತಿ ಮನವರಿಕೆಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳು ಪಾಕಿಸ್ತಾನದ ಸೈನ್ಯದ ಆಶ್ರಯ ಪಡೆದ ನಂತರ ಸುರಕ್ಷಿತ ಭಾವನೆ ಹೊಂದಿದ್ದರು. ಆದರೆ ನಮ್ಮ ಸಶಸ್ತ್ರ ಪಡೆಗಳು ಅವರನ್ನು ಒಂದೇ ಏಟಿಗೆ ತಲೆಬಾಗುವಂತೆ ಮಾಡಿತು ಎಂದು ಹೇಳಿದರು.
ಪಾಕಿಸ್ತಾನದ ವಾಯುನೆಲೆ ಮತ್ತು ಮಿಲಿಟರಿ ಸ್ಥಾಪನೆಗಳು ಕೆಲವೇ ನಿಮಿಷಗಳಲ್ಲಿ ನಾಶವಾಗಿದೆ. ಇದು ಹೊಸ ಭಾರತ ಮತ್ತು ಇದು ಹೊಸ ಭಾರತದ ಶಕ್ತಿ ಎಂದು ಅವರು ಹೇಳಿದರು.
ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್ ಸಮಯದಲ್ಲಿ ಬಿಎಸ್ಎಫ್ ಸಿಬ್ಬಂದಿ ಅನುಕರಣೀಯ ಧೈರ್ಯ, ಶೌರ್ಯ ಮತ್ತು ಕೌಶಲ್ಯವನ್ನು ಪ್ರದರ್ಶಿಸಿದರು ಎಂದು ಹೇಳಿದರು.







