ಪಹಲ್ಗಾಮ್ ದಾಳಿಯಲ್ಲಿ ಮೃತ ಶುಭಂ ದ್ವಿವೇದಿ ಕುಟುಂಬವನ್ನು ಭೇಟಿಯಾದ ಪ್ರಧಾನಿ ಮೋದಿ

PC : @mygovindia
ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಶುಭಂ ದ್ವಿವೇದಿಯವರ ಕುಟುಂಬವನ್ನು ಶುಕ್ರವಾರ ಇಲ್ಲಿಯ ಚಕೇರಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು.
‘ಅದೊಂದು ಅತ್ಯಂತ ಭಾವನಾತ್ಮಕ ಭೇಟಿಯಾಗಿತ್ತು. ಮೋದಿಯವರನ್ನು ಭೇಟಿಯಾದಾಗ ಕುಟುಂಬದ ಎಲ್ಲ ಸದಸ್ಯರು ರೋದಿಸತೊಡಗಿದ್ದರು’ ಎಂದು ದ್ವಿವೇದಿಯವರ ಸೋದರ ಸಂಬಂಧಿ ಸೌರಭ್ ದ್ವಿವೇದಿಯವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ದ್ವಿವೇದಿ(31) ಭಯೋತ್ಪಾದಕ ದಾಳಿಗೆ ಕೆಲವೇ ವಾರಗಳ ಮುನ್ನ, ಫೆ.12ರಂದು ವಿವಾಹವಾಗಿದ್ದರು.
ಈ ಹಿಂದೆ,ಮೇ 14ರಂದು ದ್ವಿವೇದಿಯವರ ಬಂಧುಗಳು ಸಂಸದ ರಮೇಶ್ ಅವಸ್ಥಿಯವರ ನೆರವಿನೊಂದಿಗೆ ಕಾನ್ಪುರದಲ್ಲಿ ಮೋದಿಯವರನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
‘ಮೇ 30ರಂದು ಕಾನ್ಪುರಕ್ಕೆ ನಿಗದಿತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ನಮಗೆ ಅವಕಾಶ ನೀಡುವಂತೆ ನಾವು ಅವಸ್ಥಿಯವರನ್ನು ಕೋರಿಕೊಂಡಿದ್ದೆವು. ಅವರು ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಲ್ಲದೆ, ನಮ್ಮನ್ನು ಭೇಟಿಯಾಗುವಂತೆ ಕೋರಿ ಮೋದಿಯವರಿಗೆ ತಕ್ಷಣ ಪತ್ರವನ್ನೂ ಬರೆದಿದ್ದರು. ಮೋದಿ ತನ್ನ ಕಾನ್ಪುರ ಭೇಟಿ ಸಂದರ್ಭದಲ್ಲಿ ನಮ್ಮನ್ನು ನಿಜಕ್ಕೂ ಭೇಟಿಯಾಗಲಿದ್ದಾರೆ ಎನ್ನುವುದು ನಿನ್ನೆ ನಮಗೆ ಮಾಧ್ಯಮಗಳಿಂದ ಗೊತ್ತಾಗಿತ್ತು. ಈ ಸುದ್ದಿಯು ನಮಗೆ ಭಾರೀ ನೆಮ್ಮದಿ ಮತ್ತು ಭರವಸೆಯನ್ನು ನೀಡಿತ್ತು. ದೇಶಕ್ಕಾಗಿ ಮಾಡಲಾದ ತ್ಯಾಗಗಳನ್ನು ಅಪಾರವಾಗಿ ಗೌರವಿಸುವ ಪ್ರಧಾನಿ ನಮ್ಮ ಮನವಿಯನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನಮಗಿತ್ತು’ಎಂದು ಸೌರಭ್ ದ್ವಿವೇದಿ ತಿಳಿಸಿದರು.
ದ್ವಿವೇದಿ ತನ್ನ ಪತ್ನಿ ಮತ್ತು ನಾದಿನಿಯೊಂದಿಗೆ ಪಹಲ್ಗಾಮ್ಗೆ ಭೇಟಿ ನೀಡಿದ್ದರು. ಭಯೋತ್ಪಾದಕರು ಅವರ ತಲೆಗೆ ಗುಂಡಿಕ್ಕಿದ್ದು, ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದರು.
ತನ್ನ ಪತಿಯ ತ್ಯಾಗಕ್ಕಾಗಿ ರಾಷ್ಟ್ರೀಯ ಮನ್ನಣೆಗಾಗಿ ದ್ವಿವೇದಿಯವರ ಪತ್ನಿ ಅಶ್ನಯಾ ಮನವಿ ಮಾಡಿಕೊಂಡಿದ್ದರು.
‘ಶುಭಂ ಅವರಿಗೆ ಹುತಾತ್ಮ ಸ್ಥಾನಮಾನವನ್ನು ನೀಡಬೇಕು ಎನ್ನುವುದು ನನ್ನ ಏಕೈಕ ಬಯಕೆಯಾಗಿದೆ’ ಎಂದು ಅವರು ಹೇಳಿದ್ದರು.







