ಕಾಂಗ್ರೆಸ್-ಆರ್ಜೆಡಿ ಅಧಿಕಾರಕ್ಕೇರಿದರೆ ಬಿಹಾರದಲ್ಲಿ ಜಂಗಲ್ರಾಜ್: ಪ್ರಧಾನಿ ಮೋದಿ
5900 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ

ನರೇಂದ್ರ ಮೋದಿ | PTI
ಹೊಸದಿಲ್ಲಿ: ಶೀಘ್ರದಲ್ಲೇ ವಿಧಾನಸಭಾ ಚುನಾವಣೆಗೆ ತೆರಳಲಿರುವ ಬಿಹಾರದ ಸಿವಾನ್ಗೆ ಶುಕ್ರವಾರ ಭೇಚಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭ, ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಹಾರವನ್ನು ದುಸ್ಥಿತಿಗೆ ತಂದಿದ್ದವು. ಆದರೆ ನಿತೀಶ್ ಕುಮಾರ್ ನೇತೃತ್ವದ ಹಾಲಿ ಎನ್ಡಿಎ ಸರಕಾರವು ಬಿಹಾರವನ್ನು ಮರಳಿ ಹಳಿಗೆ ತಂದಿದೆ ಎಂದವರು ಹೇಳಿದರು.
ಬಿಹಾರವನ್ನು ಜಂಗಲ್ ರಾಜ್ ಆಗಿ ಮಾಡಿದವರು ತಮ್ಮ ಹಳೆ ಕೃತ್ಯಗಳನ್ನು ಪುನಾರವರ್ತಿಸಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದವರು ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ವಿರುದ್ಧ ಹರಿಹಾಯ್ದರು. ಬಿಹಾರದ ಪ್ರಗತಿಗೆ ಬ್ರೇಕ್ ಹಾಕಲು ಸಿದ್ಧರಾಗಿರುವವರನ್ನು ದೂರವಿರಿಸಬೇಕಾಗಿದೆ. ಇವರಿಗೆ ಗರೀಬಿ ಹಠಾವೋ ಎಂಬ ಘೋಷಣೆಗಳನ್ನು ಕೂಗುವುದು ಚಾಳಿಯಾಗಿ ಬಿಟ್ಟಿದೆ. ಆದರೆ ಎನ್ಡಿಎ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಸಾಧ್ಯವಾಗಿಸಿದೆ ಎಂದು ಪ್ರಧಾನಿ ಹಳಿದರು.
ತಮ್ಮ ಕುಟುಂಬದ ಅಭ್ಯುದಯವೇ ಆರ್ಜೆಡಿ-ಕಾಂಗ್ರೆಸ್ನ ಮಂತ್ರವಾಗಿದೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಂತಹ ಶಕ್ತಿಗಳನ್ನು ದೂರವಿರಿಸಿ ಎಂದು ಮೋದಿ ಬಿಹಾರದ ಜನತೆಗೆ ಕರೆ ನೀಡಿದರು. ಎನ್ಡಿಎ ಸರಕಾರವು ವಿದ್ಯುತ್ ಹಾಗೂ ನಲ್ಲಿ ನೀರು ಸಂಪರ್ಕದೊಂದಿಗೆ 1.5 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ, 55 ಸಾವಿರ ಕಿ.ಮೀ. ಗಾಮೀಣ ರಸ್ತೆಗಳನ್ನು ಹಾಗೂ 45 ಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ನಿರ್ಮಿಸಿದೆ ಎಂದವರು ಹೇಳಿದರು.
ಬಿಹಾರದ ಜನತೆ ನನ್ನದೇ ಕುಟುಂಬ ಸದಸ್ಯರಾಗಿದ್ದು, ಅವರು ಘನತೆಯಿಂದ ಬಾಳುವವರೆಗೆ ತಾನು ನೆಮ್ಮದಿಯಿಂದ ನಿದ್ರಿಸುವುದಿಲ್ಲವೆಂದು ಮೋದಿ ಭಾಷಣದ ಮುಕ್ತಾಯಗೊಳಿಸುತ್ತಾ ಹೇಳಿದರು.
ವಿಧಾನಸಭಾ ಚುನಾವಣೆಗೆ ತೆರಳಲಿರುವ ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಜನವರಿಯಿಂದ ನೀಡಿರುವ ನಾಲ್ಕನೇ ಭೇಟಿ ಇದಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯು ಆಕ್ಟೋಬರ್-ನವೆಂಬರ್ನಲ್ಲಿ ನಡೆಯುವ ನಿರೀಕ್ಷೆಯಿದೆ.
►ಬಿಹಾರ: 5900 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ಬಿಹಾರದ ಸಿವಾನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 5900 ಕೋಟಿ ರೂ. ವೆಚ್ಚದ 28 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು . 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವೈಶಾಲಿ- ದಿಯೊರಿಯಾ ರೈಲು ಮಾರ್ಗ ಯೋಜನೆಯನ್ನು ಅಉದ್ಘಾಟಿಸಿದರು ಹಾಗೂ ನೂತನ ರೈಲುಯಾನ ಸೇವೆಗೆ ಚಾಲನೆ ನೀಡಿದರು.
ಪಾಟಲಿಪುತ್ರ (ಪಾಟ್ನಾ) ಹಾಗೂ ಗೋರಖ್ಪುರ (ಉತ್ತರಪ್ರದೇಶ) ನಡುವೆ ವಂದೇಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದರು. ಆಫ್ರಿಕನ್ ರಾಷ್ಟ್ರವಾದ ರಿಪಬ್ಲಿಕ್ ಗಿನಿಯಾಗೆ ರೈಲು ಎಂಜಿನ್ಗಳ ರಫ್ತಿಗಾಗಿ ಮರ್ಹೊರಾದಲ್ಲಿ ಅತ್ಯಾಧುನಿಕ ಲೋಕೊಮೋಟಿವ್ ಕಾರ್ಖಾನೆಯನ್ನು ಉದ್ಘಾಟಿಸಿದರು.
ಗಂಗಾನದಿಯ ಸಂರಕ್ಷಣೆ ಹಾಗೂ ಶುದ್ಧೀಕರಣಕ್ಕಾಗಿ ನಮಾಮಿ ಗಂಗಾ ಯೋಜನೆಯಡಿ 6 ಒಳಚರಂಡಿ ನೀರು ಸಂಸ್ಕರಣಾ ಘಟಕ (ಎಸ್ಟಿಪಿ)ಗಳನ್ನು ಪ್ರಧಾನಿಯವರು ಉದ್ಘಾಟಿಸಿದರು. ಹೆಚ್ಚುವರಿ ನೀರಿನ ಪೂರೈಕೆಗೆ ಶಿಲಾನ್ಯಾಸಗೈದರು ಹಾಗೂ ಬಿಹಾರಾದ್ಯಂತ ಒಟ್ಟು 3 ಸಾವಿರ ಕೋಟಿ ರೂ. ಹೆಚ್ಚುವರಿ ನೀರಿನ ಪೂರೈಕೆ, ನೈರ್ಮಲ್ಯ ಹಾಗೂ ಎಸ್ಟಿಪಿ ಯೋಜನೆಗಳಿಗೆ ಶಿಲಾನ್ಯಾಸಗೈದರು.
ಬಿಹಾರದಲ್ಲಿ ಇಂಧನ ವಲಯದ ಅಭಿವೃದ್ಧಿಗೆ ವೇಗವನ್ನು ನೀಡುವ ಕ್ರಮವಾಗಿ ಪ್ರಧಾನಿಯವರು ಮುಜಾಫರ್ಪುರ, ಮೋತಿಹರಿ,ಬೆಟ್ಟಿಯಾ ಹಾಗೂ ಸಿವಾನ್ ಸೇರಿದಂತೆ 15 ಗ್ರಿಡ್ಸಬ್ಸ್ಟೇಶನ್ಗಳಲ್ಲಿ 500 ಮೆಗಾವ್ಯಾಟ್ ಸಾಮರ್ಥ್ಯದ ಬಾುಟರಿ ಇಂಧನ ದಾಸ್ತಾನು ವ್ಯವಸ್ಥೆ (ಬಿಇಎಸ್ಎಸ್)ಗೆ ಚಾಲನೆ ನೀಡಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆ-ನಗರ (ಪಿಎಂಎವೈ-ಯು) ಯೋಜನೆಯಡಿ 53,600ಕ್ಕೂ ಅಧಿಕ ಫಲಾನುಭವಿಗಳಿಗೆ ಮೊದಲ ಕಂತನ್ನು ಹಸ್ತಾಂತರಿಸಿದರು ಹಾಗೂ ಆಯ್ದ ಫಲಾನುಭವಿಗಳಿಗೆ ಕೀಲಿಕೈಗಳನ್ನು ಹಸ್ತಾಂತರಿಸುವ ಮೂಲಕ ನಿರ್ಮಾಣ ಪೂರ್ಣಗೊಂಡಿರುವ 6,600 ಮನೆಗಳ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧುರಿ ಹಾಗೂ ವಿಜಯ ಕುಮಾರ್ ಸಿನ್ಹಾ, ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನಂ ಹಾಗೂ ಇತರ ಹಿರಿಯ ಎನ್ಡಿಎ ನಾಯಕರು ಉಪಸ್ಥಿತರಿದ್ದರು.







