ಉದ್ವಿಗ್ನತೆ ಶಮನಕ್ಕೆ ಮತ್ತೆ ಕರೆ; ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ

ನರೇಂದ್ರ ಮೋದಿ | PTI
ಹೊಸದಿಲ್ಲಿ: ಇರಾನ್ ಅಧ್ಯಕ್ಷ ಮಸೂದ್ ಪೆಜಶ್ಕಿಯಾನ್ ಜೊತೆ ರವಿವಾರ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಇರಾನ್-ಇಸ್ರೇಲ್ ಸಂಘರ್ಷವು ಇತ್ತೀಚಿಗೆ ಉಲ್ಬಣಗೊಂಡಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಇಸ್ರೇಲ್ ಜೊತೆಗಿನ ಸಂಘರ್ಷವನ್ನು ತಕ್ಷಣವೇ ಶಮನಗೊಳಿಸುವಂತೆ ಅವರು ಕರೆ ನೀಡಿದ್ದಾರೆ.
ಇರಾನಿನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಗಳ ಹಿನ್ನೆಲೆಯಲ್ಲಿ ಪೆಜಶ್ಕಿಯಾನ್ ಕರೆ ಮಾಡಿದ್ದು,ಉಭಯ ನಾಯಕರು 45 ನಿಮಿಷಗಳ ಕಾಲ ಮಾತುಕತೆಗಳನ್ನು ನಡೆಸಿದರು. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮೋದಿಯವರಿಗೆ ವಿವರಿಸಿದ ಇರಾನ್ ಅಧ್ಯಕ್ಷರು ಪ್ರಾದೇಶಿಕ ಶಾಂತಿ,ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಭಾರತವನ್ನು ಸ್ನೇಹಿತ ಮತ್ತು ಪಾಲುದಾರ ಎಂದು ಬಣ್ಣಿಸಿದರು ಎಂದು ಬಲ್ಲ ಮೂಲಗಳು ತಿಳಿಸಿದವು.
ಭಾರತದ ನಿಲುವು ಮತ್ತು ಉದ್ವಿಗ್ನತೆ ಶಮನ,ಮಾತುಕತೆ ಹಾಗೂ ರಾಜತಾಂತ್ರಿಕತೆಗೆ ಕರೆಗಾಗಿ ಪೆಜಶ್ಕಿಯಾನ್ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವಲ್ಲಿ ಭಾರತದ ಪಾತ್ರವು ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
‘ಇರಾನ್ ಅಧ್ಯಕ್ಷ ಮಸೂದ್ ಪೆಜಶ್ಕಿಯಾನ್ ಜೊತೆ ಮಾತನಾಡಿದ್ದೇನೆ. ಪ್ರಸ್ತುತ ಪರಿಸ್ಥಿತಿಯ ಕುರಿತು ನಾವು ವಿವರವಾಗಿ ಚರ್ಚಿಸಿದ್ದೇವೆ. ಪರಿಸ್ಥಿತಿ ಇತ್ತೀಚಿಗೆ ಉಲ್ಬಣಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದೇನೆ. ಪ್ರಾದೇಶಿಕ ಶಾಂತಿ,ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರ ಮರುಸ್ಥಾಪಿಸಲು ತಕ್ಷಣವೇ ಉದ್ವಿಗ್ನತೆ ಶಮನ,ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಮ್ಮ ಕರೆಯನ್ನು ಪುನರುಚ್ಚರಿಸಿದ್ದೇನೆ’ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರವಿವಾರ ಬೆಳಿಗ್ಗೆ ಇರಾನಿನ ಫೊರ್ಡೊ ಮೇಲೆ ಅಮೆರಿಕದ ಕನಿಷ್ಠ ಆರು ಬಿ-12 ಸ್ಟೆಲ್ತ್ ವಿಮಾನಗಳು ಬಾಂಬ್ ದಾಳಿಗಳನ್ನು ನಡೆಸಿದರೆ, ಟೊಮಾಹಾಕ್ ಕ್ಷಿಪಣಿಗಳು ಇತರ ಎರಡು ಪರಮಾಣು ಸ್ಥಾವರಗಳಿಗೆ ಅಪ್ಪಳಿಸಿವೆ.
ವಿಶ್ವಸಂಸ್ಥೆಯ ನಿರ್ಣಯಗಳನ್ನು ಉಲ್ಲಂಘಿಸಿ ಪವಿತ್ರ ನಗರ ಕೋಮ್ ಸಮೀಪದ ಪರ್ವತದ ಕೆಳಗೆ ರಹಸ್ಯವಾಗಿ ನಿರ್ಮಾಣಗೊಂಡಿದ್ದ ಫೊರ್ಡೊ ಪರಮಾಣು ಸ್ಥಾವರವನ್ನು ಮೊದಲ ಬಾರಿಗೆ 2009ರಲ್ಲಿ ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗಿತ್ತು. ಸಂಭಾವ್ಯ ವಾಯು ದಾಳಿಗಳಿಂದ ರಕ್ಷಿಸಲು ಭೂಗತದಲ್ಲಿ ನಿರ್ಮಿಸಲಾಗಿರುವ ‘ತುರ್ತು ಸೌಲಭ್ಯ’ ಎಂದು ಆರಂಭದಲ್ಲಿ ಬಣ್ಣಿಸಿದ್ದ ಇರಾನ್,ಯುರೇನಿಯಂ ಸಮೃದ್ಧಗೊಳಿಸುವ ಈ ಸ್ಥಾವರವು ಸುಮಾರು 3,000 ಸೆಂಟ್ರಿಫ್ಯೂಜ್ಗಳನ್ನು ಇರಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ ಎಂಬ ಸುಳಿವನ್ನು ನೀಡಿತ್ತು.
ಉದ್ವಿಗ್ನತೆ ಇನ್ನಷ್ಟು ಹೆಚ್ಚಿದರೆ ಇರಾಕ್,ಜೋರ್ಡಾನ್,ಲೆಬನಾಬ್, ಸಿರಿಯಾ ಮತ್ತು ಯೆಮನ್ ಸೇರಿದಂತೆ ಪಶ್ಚಿಮ ಏಶ್ಯಾ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರದ ಮೇಲೆ ವ್ಯಾಪಕ ಪರಿಣಾಮಗಳು ಉಂಟಾಗಲಿವೆ ಎಂದು ತಜ್ಞರು ಹೇಳಿದ್ದಾರೆ.







