ಭಾರತ-ಮಾರಿಷಸ್ ನಡುವೆ ಶೀಘ್ರವೇ ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಆರಂಭ: ಪ್ರಧಾನಿ ಮೋದಿ

Photo : PTI
ವಾರಣಾಸಿ(ಉ.ಪ್ರ),ಸೆ.11: ಭಾರತ ಮತ್ತು ಮಾರಿಷಸ್ ಶೀಘ್ರವೇ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ಆರಂಭಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಪ್ರಕಟಿಸಿದರು.
ಇದು ಉಭಯ ದೇಶಗಳ ನಡುವಿನ ಹಣಕಾಸು ಮತ್ತು ಆರ್ಥಿಕ ಸಂಬಂಧಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಬೃಹತ್ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದರು.
ವಾರಣಾಸಿಯಲ್ಲಿ ಮಾರಿಷಸ್ ಪ್ರಧಾನಿ ನವೀನಚಂದ್ರ ರಾಮಗುಲಾಂ ಅವರೊಂದಿಗೆ ಮಾತುಕತೆಗಳ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ,ಕಳೆದ ವರ್ಷ ಮಾರಿಷಸ್ ನಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ಗಳಿಗೆ ಚಾಲನೆಯ ಬಳಿಕ ತೆಗೆದುಕೊಳ್ಳಲಾಗಿರುವ ಈ ನಿರ್ಧಾರವು ಉಭಯ ದೇಶಗಳ ಉದ್ಯಮಗಳು ಮತ್ತು ನಾಗರಿಕರ ನಡುವಿನ ವಹಿವಾಟುಗಳನ್ನು ಇನ್ನಷ್ಟು ಸುಲಭಗೊಳಿಸಲಿದೆ ಎಂದು ಹೇಳಿದರು.
‘ನಾವು ಈಗ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದು,ಈ ಕ್ರಮವು ದ್ವಿಪಕ್ಷೀಯ ವ್ಯಾಪಾರವನ್ನು ಸುಗಮಗೊಳಿಸಲಿದೆ’ ಎಂದರು.
*ವಿಶೇಷ ಆರ್ಥಿಕ ಪ್ಯಾಕೇಜ್
ವಿಶೇಷ ಆರ್ಥಿಕ ಪ್ಯಾಕೇಜ್ನ್ನೂ ಅನಾವರಣಗೊಳಿಸಿದ ಮೋದಿ, ಅದನ್ನು ಉಭಯ ದೇಶಗಳು ಹಂಚಿಕೊಂಡಿರುವ ಭವಿಷ್ಯದಲ್ಲಿ ಹೂಡಿಕೆ ಎಂದು ಬಣ್ಣಿಸಿದರು.
ಈ ಪ್ಯಾಕೇಜ್ ಸರ್ ಶಿವಸಾಗರ ರಾಮಗುಲಾಂ ರಾಷ್ಟ್ರೀಯ ಆಸ್ಪತ್ರೆ,ಪಶು ವೈದ್ಯಕೀಯ ಶಾಲೆ ಮತ್ತು ಪಶು ಆಸ್ಪತ್ರೆ ಹಾಗೂ ಆಯುಷ್ ಸೆಂಟರ್ ಆಫ್ ಎಕ್ಸಲೆನ್ಸ್ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಹಣಕಾಸು ನೆರವನ್ನು ಒದಗಿಸಲಿದೆ. ಈ ಉಪಕ್ರಮಗಳು ಮೂಲಸೌಕರ್ಯವನ್ನು ಬಲಪಡಿಸುತ್ತವೆ. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ಹೆಚ್ಚಿಸುತ್ತವೆ ಎಂದು ಮೋದಿ ಒತ್ತಿ ಹೇಳಿದರು.
ಮೋದಿ ಮತ್ತು ರಾಮಗುಲಾಂ ಮಾತುಕತೆಗಳ ಪ್ರಮುಖಾಂಶಗಳು;
*ಮಾರಿಷಸ್ನಲ್ಲಿ ಚಾಗೋಸ್ ಸಾಗರ ಸಂರಕ್ಷಿತ ಪ್ರದೇಶ, ಎಸ್ಎಸ್ಆರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಸಿ ಗೋಪುರ ಹಾಗೂ ಹೆದ್ದಾರಿಗಳು ಮತ್ತು ವರ್ತುಲ ರಸ್ತೆಗಳ ವಿಸ್ತರಣೆಯಂತಹ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಮುನ್ನಡೆಸಲು ಉಭಯ ನಾಯಕರ ಒಪ್ಪಿಗೆ
*ಭಾರತವು ಮಾರಿಷಸ್ಗೆ 100 ವಿದ್ಯುತ್ ಚಾಲಿತ ಬಸ್ಗಳನ್ನು ಒದಗಿಸಲಿದ್ದು,ಈಗಾಗಲೇ 10 ಬಸ್ಗಳನ್ನು ಪೂರೈಸಲಾಗಿದೆ. ಟಾಮರಿಂಡ್ ಫಾಲ್ಸ್ನಲ್ಲಿ 17.5 ಮೆ.ವ್ಯಾ.ಸಾಮರ್ಥ್ಯದ ತೇಲುವ ಸೌರಶಕ್ತಿ ಸ್ಥಾವರ ಸ್ಥಾಪನೆಗೆ ಭಾರತದ ನೆರವು
*ಮಾರಿಷಸ್ನಲ್ಲಿ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯದ ಸ್ಥಾಪನೆ
*ಸಂಶೋಧನೆ ಮತ್ತು ಆವಿಷ್ಕಾರವನ್ನು ಹೆಚ್ಚಿಸಲು ಮಾರಿಷಸ್ ವಿವಿಯೊಂದಿಗೆ ಐಐಟಿ ಮದ್ರಾಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಸಹಭಾಗಿತ್ವ







