ಪ್ರಧಾನಿ ಮೋದಿ ಕುರಿತು ಜಾತಿ ನಿಂದನೆ ಆರೋಪ | ರಾಹುಲ್ ಗಾಂಧಿ ವಿರುದ್ಧದ ಅರ್ಜಿ ವಜಾಗೊಳಿಸಿದ ಜೈಪುರ ನ್ಯಾಯಾಲಯ

ರಾಹುಲ್ ಗಾಂಧಿ | Photo Credit : PTI
ಜೈಪುರ, ಜ. 14: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜಾತಿ ನಿಂದನೆ ಹೇಳಿಕೆ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾದ ಮರು ಪರಿಶೀಲನಾ ಅರ್ಜಿಯನ್ನು ಜೈಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯ ಈ ಹಿಂದೆ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ ಹಾಗೂ ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಲು ನಿರಾಕರಿಸಿದೆ.
ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಖ್ಯೆ 4 ನೀಡಿದ ಆದೇಶ ಪ್ರಶ್ನಿಸಿ ನ್ಯಾಯಾವಾದಿ ವಿಜಯ್ ಕಲಂದರ್ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯನ್ನು ಪರಿಶೀಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ನೀಲಂ ಕರ್ವಾ ಅವರು ಮಂಗಳವಾರ ಈ ಆದೇಶ ನೀಡಿದ್ದಾರೆ.
ಅರ್ಜಿದಾರರ ಹೇಳಿಕೆ ಹಾಗೂ ಸಲ್ಲಿಸಲಾದ ಪುರಾವೆಗಳು ಅರ್ಜಿಯನ್ನು ಬೆಂಬಲಿಸುವುದಿಲ್ಲ. ಇದು ಅರ್ಜಿಯನ್ನು ತಿರಸ್ಕರಿಸಲು ಕಾರಣವಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಿಸಿದ್ದಾರೆ.
ದೂರಿನ ವಾಸ್ತವಾಂಶವನ್ನು ಸಮರ್ಪಕವಾಗಿ ಪರಿಶೀಲಿಸಲು ಕೆಳ ನ್ಯಾಯಾಲಯ ವಿಫಲವಾಗಿದೆ ಎಂದು ದೂರುದಾರರು ಈ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.





