ವಿಶ್ವಸಂಸ್ಥೆಯಲ್ಲಿ ಸುಧಾರಣೆಗಳಿಗೆ ಪ್ರಧಾನಿ ಮೋದಿ ಕರೆ
‘‘20ನೇ ಶತಮಾನದ ಧೋರಣೆಗಳನ್ನೇ ಮುಂದುವರಿಸುವುದರಿಂದ ಜಗತ್ತಿಗೆ ಒಳಿತಾಗದು’’

ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಇಪ್ಪತ್ತೊಂದನೇ ಶತಮಾನದಲ್ಲಿರುವಾಗ 20ನೇ ಶತಮಾನದ ಮಧ್ಯ ಕಾಲದ ನಿಲುವನ್ನು ತಾಳುವುದರಿಂದ ಜಗತ್ತಿಗೆ ಒಳಿತಾಗಲಾರದೆಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಪ್ರತಿಪಾದಿಸಿದ್ದು, ವಿಶ್ವಸಂಸ್ಥೆಯಲ್ಲಿ ಬಲವಾದ ಸುಧಾರಣೆಗಳು ನಡೆಯಬೇಕೆಂದು ಕರೆ ನೀಡಿದ್ದಾರೆ. ಜಗತ್ತಿನಲ್ಲಿ ಬದಲಾಗುತ್ತಿರುವ ವಾಸ್ತವತೆಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯಲ್ಲಿ ಎಲ್ಲರ ಧ್ವನಿಗಳಿಗೆ ಪ್ರಾತಿನಿಧ್ಯ ದೊರೆಯುವಂತಾಗಬೇಕೆಂದು ಅವರು ಆಶಿಸಿದ್ದಾರೆ.
‘‘ಇಂದಿನ ಜಗತ್ತು ಬಹುಧ್ರುವೀಯವಾಗಿದ್ದು, ಇಲ್ಲಿ ಕಾನೂನುಗಳನ್ನು ಆಧರಿಸಿದ ವ್ಯವಸ್ಥೆಗೆ ಅತ್ಯಂತ ಮುಖ್ಯವಾಗಿರುವಂತಹ ಹಾಗೂ ಎಲ್ಲಾ ವಿಷಯಗಳಲ್ಲಿಯೂ ನ್ಯಾಯಯುತ ಮತ್ತು ಸಂವೇದನಾಕಾರಿ ಯಾದ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆಯ ಅಗತ್ಯವಿರುತ್ತದೆ. ಆದರೆ ಈ ಸಂಸ್ಥೆಗಳು ಕಾಲಕ್ಕೆ ಅನುಗುಣವಾಗಿ ಬದಲಾವಣೆಯಾದಲ್ಲಿ ಮಾತ್ರವೇ ಅವು ತಮ್ಮ ಪ್ರಸಕ್ತತೆಯನ್ನು ಉಳಿಸಿಕೊಳ್ಳಲಿವೆ’’ ಎಂದು ಪ್ರಧಾನಿ ತಿಳಿಸಿದ್ದಾರೆ.
‘‘21ನೇ ಶತಮಾನದಲ್ಲಿ, 20ನೇ ಶತಮಾನದ ಮಧ್ಯಕಾಲದ ಧೋರಣೆಗಳನ್ನು ಮುಂದುವರಿಸಿಕೊಂಡು ಹೋದಲ್ಲಿ ಜಗತ್ತಿಗೆ ಪ್ರಯೋಜನವಾಗದು. ಹೀಗಾಗಿ ನಮ್ಮ ಅಂತಾರಾಷ್ಟ್ರೀಯ ಸಂಸ್ಥೆಗಳು (ವಿಶ್ವಸಂಸ್ಥೆ ಇತ್ಯಾದಿ) ಬದಲಾಗುತ್ತಿರುವ ವಾಸ್ತವತೆಗಳಿಗೆ ಮಾನ್ಯತೆಯನ್ನು ನೀಡಬೇಕಾಗಿದೆ. ಅವು ತಮ್ಮ ನಿರ್ಧಾರ ರೂಪಿಸುವ ವೇದಿಕೆಗಳನ್ನು ವಿಸ್ತರಿಸಬೇಕಾಗಿದೆ ಹಾಗೂ ತಮ್ಮ ಆದ್ಯತೆಗಳ ಬಗ್ಗೆ ಮರು ಅವಲೋಕನ ನಡೆಸಬೇಕಾಗಿದೆ ಹಾಗೂ ಆ ವಿಷಯದಲ್ಲಿ ಧ್ವನಿಗಳ ಪ್ರಾತಿನಿಧ್ಯವನ್ನು ಖಾತರಿಪಡಿಸಬೇಕಾಗಿದೆ’’ ಎಂದು ಅವರು ಹೇಳಿದರು.
‘‘ಇದನ್ನು ಸಕಾಲದಲ್ಲಿ ನಡೆಸಲು ಸಾಧ್ಯವಾಗದೆ ಇದ್ದಲ್ಲಿ ಸಣ್ಣ ಅಥವಾ ಪ್ರಾದೇಶಿಕ ವೇದಿಕೆಗಳು ಅಧಿಕ ಮಹತ್ವವನ್ನು ಪಡೆಯಲು ಆರಂಭಿಸುತ್ತವೆ’’ ಎಂದು ಮೋದಿ ತಮ್ಮ 80 ನಿಮಿಷಗಳ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜಿ20 ಅಂತಹ ಸಂಸ್ಥೆಗಳಲ್ಲೊಂದಾಗಿದ್ದು, ಹಲಾರು ದೇಶಗಳು ಅದನ್ನು ಅತ್ಯಂತ ಆಶಾವಾದದೊಂದಿಗೆ ನೋಡುತ್ತಿವೆ. ಯಾಕೆಂದರೆ ಜಗತ್ತು ಕ್ರಿಯೆಗಳು ಹಾಗೂ ಫಲಿತಾಂಶಗಳಿಗಾಗಿ ಎದುರು ನೋಡುತ್ತದೆಯೇ ಹೊರತು ಅವು ಎಲ್ಲಿಂದ ಬಂತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದರು.
ಇಂತಹ ಸಂಧಿಗ್ಧ ಕಾಲದಲ್ಲಿ ಭಾರತಕ್ಕೆ ಜಿ20 ಅಧ್ಯಕ್ಷತೆ ದೊರೆತಿದೆ ಎಂದು ಪ್ರಧಾನಿ ಗಮನಸೆಳೆದಲು.
‘‘ವೈವಿಧ್ಯಮಯ ದೇಶವಾಗಿ, ಪ್ರಜಾಪ್ರಭುತ್ವದ ತಾಯಿಯಾಗಿ, ಜಗತ್ತಿನ ಅತ್ಯಧಿಕ ಯುವಜನತೆಯಿರುವ ದೇಶಗಳಲ್ಲೊಂದಾದ ಹಾಗೂ ಜಗತ್ತಿನ ಬೆಳವಣಿಗೆಯ ಯಂತ್ರವಾಗಿ ಜಗತ್ತಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತವು ಅತೀ ದೊಡ್ಡ ಕೊಡುಗೆಯನ್ನು ನೀಡಬೇಕಾದ ಅಗತ್ಯವಿದೆ’’ ಎಂದು ಪ್ರಧಾನಿ ಪ್ರತಿಪಾದಿಸಿದರು.
ತನ್ನ ಮಾನವ ಕೇಂದ್ರೀತ ದೃಷ್ಟಿಕೋನವನ್ನು ಮುನ್ನಡೆಸಲು ಜಿ20 ಭಾರತಕ್ಕೆ ವೇದಿಕೆಯೊಂದನ್ನು ಒದಗಿಸಿದೆ. ಸಮಗ್ರವಾಗಿ ಮಾನವಕುಲ ಎದುರಿಸುತ್ತಿರುವ ಸಮಸ್ಯೆಗಳನ್ನು ವಿನೂತನ ಪರಿಹಾರಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಸಹಯೋಗದಿಂದ ಕೆಲಸ ಮಾಡಲು ಶ್ರಮಿಸುತ್ತಿದೆ.
ವಿಶ್ವಸಂಸ್ಥೆಯಲ್ಲಿ ಅದರಲ್ಲೂ ಭದ್ರತಾ ಮಂಡಳಿಯಲ್ಲಿ ಸಮಗ್ರವಾದ ಸುಧಾರಣೆಗಳಾಗಬೇಕೆಂದು ಭಾರತವು ಹಲವಾರು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ)ಯ ಖಾಯಂ ಸದಸ್ಯತ್ವದ ಆಕಾಂಕ್ಷಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಪ್ರಬಲ ಸ್ಪರ್ಧಿಯಾಗಿದೆ.
ಪ್ರಸಕ್ತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐವರು ಖಾಯಂ ಸದಸ್ಯರಿದ್ದಾರ ಹಾಗೂ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುವ 10 ತಾತ್ಕಾಲಿಕ ಸದಸ್ಯರಿರುತ್ತಾರೆ.
ರಶ್ಯ, ಬ್ರಿಟನ್,ಚೀನಾ, ಫ್ರಾನ್ಸ್ ಹಾಗೂ ಅಮೆರಿಕಗಳು ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದು, ಯಾವುದೇ ನಿರ್ಣಯದ ವಿರುದ್ಧ ವೀಟೊ ಚಲಾಯಿಸುವ ಹಕ್ಕನ್ನು ಹೊಂದಿವೆ.







