ಪ್ರವಾಹದ ಹಿನ್ನೆಲೆ: ಎನ್ಡಿಎ ಸಂಸದರ ಜತೆಗೆ ಮೋದಿ ಔತಣಕೂಟ ರದ್ದು

ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಉಪರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಎನ್ಡಿಎ ಸಂಸದರಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ ಔತಣಕೂಟವನ್ನು ರದ್ದುಪಡಿಸಲಾಗಿದೆ. ಪಂಜಾಬ್ ಹಾಗೂ ದೇಶದ ಇತರ ಪ್ರದೇಶಗಳಲ್ಲಿ ವ್ಯಾಪಕ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ವ್ಯಾಪಕ ಹಾನಿಯ ಹಿನ್ನೆಲೆಯಲ್ಲಿ ಔತಣಕೂಟ ರದ್ದುಪಡಿಸಲಾಗಿದೆ.
ರಾಷ್ಟ್ರಪತಿ ಚುನಾವಣೆ ನಡೆಯುವ ಮುನ್ನಾ ದಿನ ಅಂದರೆ ಸೆ.9ರಂದು ಪ್ರಧಾನಿ ಮೋದಿಯವರ ನಿವಾಸದಲ್ಲಿ ಔತಣಕೂಟ ನಿಗದಿಪಡಿಸಲಾಗಿತ್ತು. ಆದಾಗ್ಯೂ ಉತ್ತರ ಭಾರತದಲ್ಲಿ ವ್ಯಾಪಕ ಮಳೆಹಾನಿ ಸಂಭವಿಸಿದ ಕಾರಣದಿಂದ ಮೋದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಈ ಕಾರಣದಿಂದ ಔತಣಕೂಟ ರದ್ದುಪಡಿಸಲಾಗಿದೆ.
ಇದಕ್ಕೂ ಮುನ್ನ ಪ್ರಧಾನಿ ದ್ರೌಪದಿ ಮುರ್ಮು, ಉತ್ತರಭಾರತದ ವಿನಾಶಕಾರಿ ಮಳೆ, ಮೇಘಸ್ಫೋಟ ಮತ್ತು ಪ್ರವಾಹ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಹಲವು ರಾಜ್ಯಗಳಲ್ಲಿ ಈ ಬಾರಿಯ ಮುಂಗಾರು ಸಾವು ಮತ್ತು ವಿನಾಶಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಅಸ್ಸಾಂ ಹಾಗೂ ದೇಶದ ಇತರ ಭಾಗಗಳ ಪ್ರವಾಹ ಪರಿಸ್ಥಿತಿಯ ಬಗ್ಗೆ ರಾಷ್ಟ್ರಪತಿ ಎಕ್ಸ್ ಪೋಸ್ಟ್ ನಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದರು.
"ಈ ಸಂಕಷ್ಟದ ಸಂದರ್ಭದಲ್ಲಿ ಈ ಭಾಗದ ಸಂತ್ರಸ್ತರ ಜತೆಗೆ ಇಡೀ ದೇಶ ಇದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಎಲ್ಲರ ಸ್ಫೂರ್ತಿಯನ್ನು ನಾನು ಶ್ಲಾಘಿಸುತ್ತೇನೆ. ಈ ಎಲ್ಲ ಸವಾಲುಗಳನ್ನು ನಾವು ಒಟ್ಟಾಗಿ ಎದುರಿಸೋಣ" ಎಂದು ರಾಷ್ಟ್ರಪತಿ ಹೇಳಿದ್ದಾರೆ.







