ಕೇರಳ| ನಾಲ್ಕು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ: ಸ್ವನಿಧಿ ಕ್ರೆಡಿಟ್ ಕಾರ್ಡ್ ಲೋಕಾರ್ಪಣೆ

Photo/ANI
ತಿರುವನಂತಪುರಂ: ಶುಕ್ರವಾರ ಕೇರಳಕ್ಕೆ ಮಂಜೂರಾಗಿರುವ ಮೂರು ಅಮೃತ್ ಭಾರತ್ ರೈಲು ಹಾಗೂ ಒಂದು ಪ್ರಯಾಣಿಕರ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿರುವ ಪುತ್ತರಿಕಂದಮ್ ಮೈದಾನದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಬೆಳಗ್ಗೆ 11 ಗಂಟೆಗೆ ಅವರು ಈ ನೂತನ ಸೇವೆಗಳಿಗೆ ಚಾಲನೆ ನೀಡಿದರು.
ತಿರುವನಂತಪುರಂ ಕೇಂದ್ರ ನಿಲ್ದಾಣದಿಂದ ತಂಬರಂ ಮಾರ್ಗದ ಅಮೃತ್ ರೈಲು, ತಿರುವನಂತಪುರಂ ಕೇಂದ್ರ ನಿಲ್ದಾಣದಿಂದ ನಾಗರ್ ಕೋಯಿಲ್-ಮಂಗಳೂರು ಮಾರ್ಗದ ಅಮೃತ್ ಭಾರತ್ ರೈಲು, ತಿರುವನಂತಪುರಂ ಉತ್ತರ ನಿಲ್ದಾಣದಿಂದ ತಿರುವನಂತಪುರಂ-ಚರ್ಲಾಪಲ್ಲಿ ಮಾರ್ಗದ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲು ಹಾಗೂ ತ್ರಿಶೂರ್ ನಿಲ್ದಾಣದಿಂದ ಗುರುವಾಯೂರ್ ಮಾರ್ಗದ ರೈಲು ಈ ಕಾರ್ಯಕ್ರಮದ ಬಳಿಕ ಸಂಚಾರ ಪ್ರಾರಂಭಿಸಿದವು.
ಇದೇ ವೇಳೆ ನಗರ ಜೀವನದ ಬಲವರ್ಧನೆಗಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಒದಗಿಸುವ ಗುರಿ ಹೊಂದಿರುವ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಯೋಜನೆಗೂ ಚಾಲನೆ ನೀಡಿದರು. ಯುಪಿಐ ಸಂಪರ್ಕ ಹೊಂದಿರುವ ಈ ಕ್ರೆಡಿಟ್ ಕಾರ್ಡ್ ಶೂನ್ಯ ಬಡ್ಡಿ ಸೌಲಭ್ಯದೊಂದಿಗೆ ಕ್ಷಿಪ್ರ ನಗದು ಸಾಲ ಒದಗಿಸಲಿದೆ ಎಂದು ಹೇಳಲಾಗಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 10.24ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸ್ವಾಗತಿಸಿದ್ದರು.
ತಿರುವನಂತಪುರಂ ಉತ್ತರ ರೈಲು ನಿಲ್ದಾಣ ಹಾಗೂ ತ್ರಿಶೂರ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಮತ್ತಿತರರು ಹಾಜರಿದ್ದರು.







