'ಮೋದಿಗೆ ಟ್ರಂಪ್ ಬಗ್ಗೆ ಭಯ' : ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸುವ ಕುರಿತು ಅಮೆರಿಕ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೆ ರಾಹುಲ್ ಗಾಂಧಿ ಟೀಕೆ

ಡೊನಾಲ್ಡ್ ಟ್ರಂಪ್ / ರಾಹುಲ್ ಗಾಂಧಿ / ಪ್ರಧಾನಿ ನರೇಂದ್ರ ಮೋದಿ (Photo credit: AP,PTI)
ಹೊಸದಿಲ್ಲಿ: ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಯಪಟ್ಟಂತೆ ಮೋದಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಟ್ರಂಪ್ ಶ್ವೇತಭವನದಲ್ಲಿ ಮಾತನಾಡುವ ವೇಳೆ, ನಾನು ಮೋದಿ ಜೊತೆ ರಷ್ಯಾದಿಂದ ಭಾರತ ತೈಲ ಖರೀದಿಸುವ ಬಗ್ಗೆ ಮಾತನಾಡಿದ್ದೇನೆ. ಮೋದಿ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಇದು ದೊಡ್ಡ ಹೆಜ್ಜೆ. ಚೀನಾ ಕೂಡ ಭಾರತವನ್ನು ಅನುಸರಿಸಬೇಕು ಎಂದು ಹೇಳಿದರು.
ಭಾರತವನ್ನು ವಿಶ್ವಾಸಾರ್ಹ ಪಾಲುದಾರ ಎಂದು ನೀವು ನೋಡುತ್ತೀರಾ ಎಂದು ಕೇಳಿದಾಗ, ಮೋದಿ ನನ್ನ ಸ್ನೇಹಿತ. ನಮ್ಮ ನಡುವೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.
ಭಾರತವು ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸುತ್ತದೆ ಎಂಬ ಟ್ರಂಪ್ ಅವರ ಹೇಳಿಕೆಯ ಬಗ್ಗೆ ಭಾರತ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವಾಗ ಷರತ್ತು ಹಾಕಿದರೂ ಮೋದಿ ಅದನ್ನು ಒಪ್ಪಿಕೊಳ್ಳುತ್ತಾರೆ. ಪ್ರಧಾನಿ ಮೋದಿ ಟ್ರಂಪ್ಗೆ ಭಯಪಡುತ್ತಿದ್ದಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ನಿರ್ಧರಿಸಲು ಮತ್ತು ಘೋಷಿಸಲು ಟ್ರಂಪ್ಗೆ ಅವಕಾಶ ನೀಡುತ್ತಾರೆ. ಟ್ರಂಪ್ ನಿರ್ಲಕ್ಷಿಸಿದರೂ ಮೋದಿ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಾರೆ. ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಆಪರೇಶನ್ ಸಿಂಧೂರ್ ವಿಷಯದಲ್ಲಿ ಟ್ರಂಪ್ ಪದೇ ಪದೇ ಹೇಳಿಕೆ ನೀಡಿದರೂ ಮೋದಿ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದ್ದಾರೆ.







