ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಅನಾವರಣಗೊಳಿಸಿದ ಇಸ್ರೋ

PC : PTI
ಹೊಸದಿಲ್ಲಿ,ಆ.23: ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಅನಾವರಣಗೊಳಿಸಿರುವ ಇಸ್ರೋ, 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ(ಬಿಎಎಸ್),2040ರ ವೇಳೆಗೆ ಚಂದ್ರಯಾನ 4 ಮತ್ತು ಮುಂದಿನ ಎರಡು ದಶಕಗಳಲ್ಲಿ ಸರಣಿ ಕ್ರಾಂತಿಕಾರಿ ಬಾಹ್ಯಾಕಾಶ ಅಭಿಯಾನಗಳಿಗಾಗಿ ಯೋಜನೆಗಳನ್ನು ಪ್ರಕಟಿಸಿದೆ.
ಶುಕ್ರವಾರ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು, ‘ಪ್ರಧಾನಿಯವರ ದೂರದೃಷ್ಟಿಯ ಆಧಾರದಲ್ಲಿ ನಾವು ಚಂದ್ರಯಾನ 4 ಮತ್ತು ಶುಕ್ರಗ್ರಹದ ಅಧ್ಯಯನಕ್ಕಾಗಿ ವೀನಸ್ ಆರ್ಬಿಟರಿ ಮಿಷನ್ ಕೈಗೊಳ್ಳಲಿದ್ದೇವೆ. 2028ರ ವೇಳೆಗೆ ಬಿಎಎಸ್ ನ ಮೊದಲ ಘಟಕವನ್ನು ಬಾಹ್ಯಾಕಾಶಕ್ಕೆ ರವಾನಿಸಲಿದ್ದು, 2035ರ ವೇಳೆಗೆ ಬಿಎಎಸ್ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
‘ಮುಂದಿನ ಪೀಳಿಗೆಯ ಉಡಾವಣಾ ವಾಹನ(ಎನ್ಜಿಎಲ್)ದ ಅಭಿವೃದ್ಧಿಗೂ ಅನುಮೋದನೆ ಲಭಿಸಿದೆ. 2040ರ ವೇಳೆಗೆ ಭಾರತವು ಚಂದ್ರನ ಮೇಲೆ ಇಳಿಯುವುದು ಮಾತ್ರವಲ್ಲ, ಅಲ್ಲಿನ ಮಾದರಿಗಳನ್ನೂ ಸುರಕ್ಷಿತವಾಗಿ ಮರಳಿ ತರಲಿದೆ. ಆ ವೇಳೆಗೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಜಗತ್ತಿನ ಯಾವುದೇ ಪ್ರಮುಖ ಬಾಹ್ಯಾಕಾಶ ಸಂಸ್ಥೆಗೆ ಸಮವಾಗಿರಲಿದೆ’ ಎಂದರು.
ಈ ಸಂದರ್ಭದಲ್ಲಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಾರತದ ಸಾಧನೆಗಳು ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಅದಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ನಂತರ ಒಂದರಂತೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವುದು ಭಾರತ ಮತ್ತು ಭಾರತೀಯ ವಿಜ್ಞಾನಿಗಳ ಸ್ವಭಾವವಾಗಿದೆ. ಕೇವಲ ಎರಡು ವರ್ಷಗಳ ಹಿಂದೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗುವ ಮೂಲಕ ಭಾರತವು ಇತಿಹಾಸವನ್ನು ನಿರ್ಮಿಸಿತ್ತು. ನಾವು ಚಂದ್ರ ಮತ್ತು ಮಂಗಳ ಗ್ರಹಗಳನ್ನು ತಲುಪಿದ್ದೇವೆ, ಈಗ ನಾವು ಆಳವಾದ ಬಾಹ್ಯಾಕಾಶದೊಳಗೆ ಇಣುಕಬೇಕಿದೆ ’ಎಂದು ಹೇಳಿದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ತನ್ನ ಇತ್ತೀಚಿನ ಸಂವಾದವನ್ನು ನೆನಪಿಸಿಕೊಂಡ ಮೋದಿ, ‘ಅವರು ನನಗೆ ತ್ರಿವರ್ಣ ಧ್ವಜವನ್ನು ತೋರಿಸಿದ್ದ ಘಳಿಗೆಯು ಪದಗಳಿಗೆ ಮೀರಿದ್ದಾಗಿತ್ತು. ನಾನು ಅವರಲ್ಲಿ ನವಭಾರತದ ಯುವಜನತೆಯ ಅಪಾರ ಧೈರ್ಯ ಮತ್ತು ಅನಂತ ಕನಸುಗಳನ್ನು ಕಂಡೆ. ಈ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು ಭಾರತದ ಸ್ವಂತ ಗಗನಯಾತ್ರಿ ತಂಡವನ್ನು ನಾವು ಸಿದ್ಧಪಡಿಸುತ್ತಿದ್ದೇವೆ ಮತ್ತು ಅದನ್ನು ಸೇರುವಂತೆ ಹಾಗೂ ಭಾರತದ ಮಹತ್ವಾಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡುವಂತೆ ನಾನು ಯುವ ಸ್ನೇಹಿತರನ್ನು ಆಹ್ವಾನಿಸುತ್ತೇನೆ ’ ಎಂದು ಹೇಳಿದರು.
ಸೆಮಿ ಕ್ರಯೊಜೆನಿಕ್ ಇಂಜಿನ್ಗಳು ಮತ್ತು ಇಲೆಕ್ಟ್ರಿಕ್ ಪ್ರೊಪಲ್ಶನ್ ತಂತ್ರಜ್ಞಾನಗಳಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸಿದ ಮೋದಿ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲು ಭಾರತೀಯ ಬಾಹ್ಯಾಕಾಶ ಹ್ಯಾಕ್ಥಾನ್ ಮತ್ತು ರೊಬೊಟಿಕ್ಸ್ ಸವಾಲುಗಳಂತಹ ಉಪಕ್ರಮಗಳನ್ನು ಪ್ರಶಂಸಿಸಿದರು.







