ಭಾರತ- ಪಾಕ್ ನಡುವೆ ಉದ್ವಿಗ್ನತೆ ನಡುವೆ ವಾಯುಸೇನೆ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ

File Photo: PTI
ಹೊಸದಿಲ್ಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಮಧ್ಯೆ ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ರವಿವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಎಪ್ರಿಲ್ 26ರಂದು ಪ್ರಧಾನಿ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಇತರ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದ್ದರು.
ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯ ನಡುವೆ ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ ಅವರು ಎಪ್ರಿಲ್ 30ರಂದು ಪ್ರಧಾನಿ ಮೋದಿ ಅವರನ್ನು ಲೋಕ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಭೇಟಿಯಾಗಿದ್ದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಎನ್ಎಸ್ಎ ದೋವಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಮೇ 3ರಂದು ಸಂಜೆ 6 ಗಂಟೆಗೆ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ತ್ರಿಪಾಠಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಆ ಬಳಿಕ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು.







