ಅಮೆರಿಕ ಭೇಟಿಯ ಟ್ರಂಪ್ ಆಹ್ವಾನವನ್ನು ತಿರಸ್ಕರಿಸಿದ ಪ್ರಧಾನಿ ಮೋದಿ
ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವಂತೆ ಟ್ರಂಪ್ಗೆ ಪ್ರಧಾನಿ ಆಹ್ವಾನ

ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ | PC : NDTV
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಬುಧವಾರ ನಡೆದ ದೂರವಾಣಿ ಸಂಭಾಷಣೆಯ ವೇಳೆ, ಕೆನಡಾದಿಂದ ಮರಳುವಾಗ ಅಮೆರಿಕಕ್ಕೆ ಭೇಟಿ ನೀಡುವಂತೆ ಡೊನಾಲ್ಡ್ ಟ್ರಂಪ್ ನೀಡಿದ ಆಹ್ವಾನವನ್ನು ಪ್ರಧಾನಿ ತಿರಸ್ಕರಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕ್ರಂ ಮಿಸ್ರಿ ಪತ್ರಿಕಾ ಪ್ರಕಟಣೆ ಪ್ರಕಾರ, ನನಗೆ ಪೂರ್ವನಿಗದಿತ ಕಾರ್ಯಕ್ರಮಗಳಿರುವುದರಿಂದ, ನಾನು ನಿಮ್ಮ ಆಹ್ವಾನವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಡೊನಾಲ್ಡ್ ಟ್ರಂಪ್ಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಈ ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆ ಇರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಪ್ರತಿ ಆಹ್ವಾನ ನೀಡಿದರು ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಪರಸ್ಪರ ಭೇಟಿಯಾಗಬೇಕಿತ್ತು. ಆದರೆ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಸಭೆಯಿಂದ ಮಧ್ಯದಲ್ಲೇ ನಿರ್ಗಮಿಸಿದ್ದರು.





