ಅನಂತ್ ಅಂಬಾನಿ ಒಡೆತನದ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ

PTI File Photo
ಜಾಮ್ ನಗರ: ಗುಜರಾತ್ ನ ಜಾಮ್ ನಗರ ಜಿಲ್ಲೆಯಲ್ಲಿರುವ ಅನಂತ್ ಅಂಬಾನಿ ಒಡೆತನದ ಪ್ರಾಣಿಗಳ ರಕ್ಷಣೆ, ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವಾದ ವಂತಾರಗೆ ರವಿವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. 3,000 ಎಕರೆಯಷ್ಟು ವಿಸ್ತಾರವಾಗಿರುವ ವಂತಾರ, ರಿಲಯನ್ಸ್ ಜಾಮ್ ನಗರ ತೈಲ ಸಂಸ್ಕರಣಾ ಸಂಕೀರ್ಣದಲ್ಲಿದೆ.
ಈ ರಕ್ಷಣಾ ಕೇಂದ್ರವನ್ನು ಸೆರೆ ಸಿಕ್ಕಿರುವ ಆನೆಗಳು ಹಾಗೂ ವನ್ಯಜೀವಿಗಳ ಕಲ್ಯಾಣಕ್ಕೆ ಮೀಸಲಿಡಲಾಗಿದ್ದು, ದೌರ್ಜನ್ಯ ಹಾಗೂ ದುರ್ಬಳಕೆಗೀಡಾಗಿರುವ ಪ್ರಾಣಿಗಳನ್ನು ರಕ್ಷಿಸಿ, ಅವಕ್ಕೆ ಅಭಯಾರಣ್ಯ, ಪುನರ್ವಸತಿ ಹಾಗೂ ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ.
ಈ ಕೇಂದ್ರವು ಸುಸ್ಥಿರ ಜೀವನೋಪಾಯ ಹಾಗೂ ಮಾನವೀಯ ಪ್ರಾಣಿ ಆರೈಕೆ ಅಭ್ಯಾಸಗಳಲ್ಲಿ ತರಬೇತಿ ನೀಡುವ ಮೂಲಕ, ಸ್ಥಳೀಯ ಸಮುದಾಯಗಳ ಸಬಲೀಕರಣದಲ್ಲೂ ತೊಡಗಿಕೊಂಡಿದೆ.
ಈ ಭೇಟಿಯ ನಂತರ, ಗೀರ್ ಸೋಮನಾಥ್ ಜಿಲ್ಲೆಯಲ್ಲಿರುವ ಸೋಮನಾಥ ದೇವಾಲಯಕ್ಕೆ ತೆರಳಲಿರುವ ಪ್ರಧಾನಿ ಮೋದಿ, ಅಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಈ ಪ್ರಖ್ಯಾತ ಪೂಜಾ ಸ್ಥಳದ ನಿರ್ವಹಣೆ ಮಾಡುತ್ತಿರುವ ಸೋಮನಾಥ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.
ಶನಿವಾರ ಗುಜರಾತ್ ಭೇಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಜೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಈ ವೇಳೆ ಅವರು ಸಾಸನ್ ನ ಗೀರ್ ವನ್ಯಜೀವಿ ಅಭಯಾರಣ್ಯದ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯ ಅಧ್ಯಕ್ಷತೆಯನ್ನೂ ವಹಿಸಿದರು.







