ಒಮಾನ್ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಕಿವಿಯಲ್ಲಿದ್ದ ಸಾಧನ ಏನು?

Photo Credit ; indiatoday.in
ಪ್ರಧಾನಿ ಮೋದಿಯವರ ಎಡಕಿವಿಯಲ್ಲಿದ್ದ ಕಿವಿಯ ಸಾಧನದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವರು ಇದನ್ನು ಟೀಕಿಸಿದರೆ, ಇನ್ನು ಕೆಲವರು ಇದು ಅವರ ಆತ್ಮವಿಶ್ವಾಸ ಮತ್ತು ವ್ಯಕ್ತಿಗತ ಶೈಲಿ ಎಂದು ಪ್ರಶಂಸಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಒಮಾನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಅಧಿಕೃತ ಭೇಟಿಗಿಂತ ಹೆಚ್ಚಾಗಿ ಅವರು ಧರಿಸಿದ್ದ ‘ಕಿವಿಯೋಲೆ’ ಸುದ್ದಿ ಮಾಡಿದೆ. ಒಮಾನ್ನ ಉಪಪ್ರಧಾನಿಯವರನ್ನು ಭೇಟಿಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಎಡಕಿವಿಯಲ್ಲಿ ʼಕಿವಿಯೋಲೆʼ ಧರಿಸಿರುವುದು ವೀಡಿಯೋಗಳಲ್ಲಿ ಕಂಡುಬಂತು. ಔಪಚಾರಿಕ ಸಂವಾದದ ಸಮಯದಲ್ಲಿ ಚಿಕ್ಕದಾದರೂ ಗಮನಾರ್ಹ ʼಕಿವಿಯೋಲೆʼ ಎದ್ದುಕಾಣುತ್ತಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಜನರ ಗಮನವನ್ನು ಸೆಳೆದಿದ್ದು, ಅನೇಕ ಬಳಕೆದಾರರು ಎಡಕಿವಿಯಲ್ಲಿದ್ದ ಕಿವಿಯ ಸಾಧನದ ಫೋಟೋ ಹಂಚಿಕೊಂಡು ಪ್ರಧಾನಿಯವರ ವಿಶಿಷ್ಟ ನೋಟವನ್ನು ಟೀಕಿಸಿದರು. ಇನ್ನು ಕೆಲವರು ಇದು ಅವರ ಆತ್ಮವಿಶ್ವಾಸ ಮತ್ತು ವ್ಯಕ್ತಿಗತ ಶೈಲಿ ಎಂದು ಪ್ರಶಂಸಿಸಿದರು.
ಏನಿದು ʼಕಿವಿಯೋಲೆʼ ಪ್ರಸಂಗ?
ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ ʼಕಿವಿಯೋಲೆʼ ಸುದ್ದಿಯಲ್ಲಿದೆ. ಆದರೆ ಸಮೀಪದಿಂದ ನೋಡಿದಾಗ ಇದು ಕಿವಿಯೋಲೆಯಲ್ಲ ಬದಲಾಗಿ ಅನುವಾದದ ಸಾಧನ ಎನ್ನುವುದು ತಿಳಿದು ಬರುತ್ತದೆ. ಉನ್ನತ ಮಟ್ಟದ ರಾಜತಾಂತ್ರಿಕ ವ್ಯವಹಾರದ ಸಂದರ್ಭದಲ್ಲಿ ಸಂವಹನ ಸರಳವಾಗಿ ನಡೆಯಲು ಅಂತಹ ಕಿವಿಯ ಸಾಧನಗಳನ್ನು ಬಳಸಲಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರು ಒಮಾನ್ನ ಉಪಪ್ರಧಾನಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಭೇಟಿಯಾದಾಗ ಈ ಕಿವಿಯ ಸಾಧನ ಧರಿಸಿದ್ದರು. ಒಮಾನ್ ಪ್ರಜೆಗಳು ಅರೆಬಿಕ್ ಭಾಷೆಯಲ್ಲಿ ಮಾತನಾಡುವ ಕಾರಣ ಸಂವಾದ ಸರಳವಾಗಲು ಪ್ರಧಾನಿ ಈ ಕಿವಿಯ ಸಾಧನವನ್ನು ಧರಿಸಿದ್ದರು.
ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿಯವರು ಒಮಾನ್ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದಿಂದ ರಫ್ತಾಗುವ ಶೇ 98ರಷ್ಟು ವಸ್ತುಗಳನ್ನು ಸುಂಕವಿಲ್ಲದೆ ಸ್ವೀಕರಿಸುವ ಅವಕಾಶವನ್ನು ಈ ಒಪ್ಪಂದದ ಮೂಲಕ ನೀಡಲಾಗಿದೆ.







