ಗಾಝಾ ದೌರ್ಜನ್ಯಗಳ ಕುರಿತು ಪ್ರಧಾನಿ ಮೋದಿ ಮೌನ ಭಾರತದ ಮೌಲ್ಯಗಳಿಗೆ ಬಗೆದ ದ್ರೋಹ : ಕಾಂಗ್ರೆಸ್ ಟೀಕೆ

Photo | newindianexpress
ಹೊಸದಿಲ್ಲಿ: ಗಾಝಾದಲ್ಲಿ ನಡೆಯುತ್ತಿರುವ “ಭಯಾನಕ ದೌರ್ಜನ್ಯ”ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ದೇಶದ ಐತಿಹಾಸಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಬುಧವಾರ ತೀವ್ರವಾಗಿ ಟೀಕಿಸಿದೆ. ಪ್ರಧಾನಿಯವರ ಈ ಮೌನವು “ನೈತಿಕ ಹೇಡಿತನ” ಮತ್ತು “ಸಂಪೂರ್ಣ ದ್ರೋಹ” ಎಂದು ಪಕ್ಷವು ಟೀಕಿಸಿದೆ.
ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕಳೆದ ಇಪ್ಪತ್ತು ತಿಂಗಳುಗಳಿಂದ ಗಾಝಾದಲ್ಲಿ ನಿರಂತರವಾಗಿ ನರಮೇಧ ನಡೆಯುತ್ತಿದೆ. ಸಾವಿರಾರು ನಾಗರಿಕರು ಬಲಿಯಾಗಿದ್ದಾರೆ. ಈ ಹತ್ಯಾಕಾಂಡಕ್ಕೆ ಹೊಣೆಗಾರರು ಯಾರು? ಪ್ರಧಾನ ಮಂತ್ರಿಗಳು ಏಕೆ ಮೌನ ವಹಿಸಿದ್ದಾರೆ?,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿ ಗಾಝಾದ ಜನರ ಭವಿಷ್ಯವೇನು? ಫೆಲೆಸ್ತೀನ್ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬರುವ ಮಾರ್ಗಸೂಚಿ ಎಲ್ಲಿದೆ? ಅಮೆರಿಕ ಮತ್ತು ಇಸ್ರೇಲ್ ಇನ್ನೆಷ್ಟು ಕಾಲ ಫೆಲೆಸ್ತೀನ್ ರಾಷ್ಟ್ರವನ್ನು ನಿರ್ಲಕ್ಷಿಸುತ್ತವೆ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಕಳೆದ ವಾರ ಅಂಗೀಕರಿಸಿದ ನಿರ್ಣಯವನ್ನು ಉಲ್ಲೇಖಿಸಿ, “ಭಾರತವು ಸದಾ ನೈತಿಕ ಆತ್ಮಸಾಕ್ಷಿಯ ದೀಪಸ್ತಂಭವಾಗಿತ್ತು. ವಸಾಹತುಶಾಹಿ ನಂತರದ ಪ್ರಪಂಚದಲ್ಲಿ ಮಾನವೀಯತೆ, ಶಾಂತಿ ಮತ್ತು ನ್ಯಾಯಕ್ಕಾಗಿ ಧ್ವನಿಯಾಗಿತ್ತು. ಆದರೆ ಇಂದು ಅದು ಮೂಕ ಪ್ರೇಕ್ಷಕನಾಗಿದೆ. ವಿದೇಶಾಂಗ ನೀತಿಯಲ್ಲಿ ನೈತಿಕ ಕಳಂಕ ಮೂಡಿದೆ,” ಎಂದು ಕಾಂಗ್ರೆಸ್ ಖಂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಸಂಘರ್ಷ ಅಂತ್ಯಗೊಳಿಸುವ ಯೋಜನೆಯನ್ನು ಸ್ವಾಗತಿಸಿದರು. ಈ ಯೋಜನೆ ಫೆಲೆಸ್ತೀನ್ ಹಾಗೂ ಇಸ್ರೇಲ್ ಜನರೊಂದಿಗೆ ಪಶ್ಚಿಮ ಏಷ್ಯಾ ಪ್ರದೇಶಕ್ಕೂ ದೀರ್ಘಕಾಲೀನ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ದಾರಿ ತೋರಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.







