ನಾವು ನಿಜವಾದ ಅಭಿವೃದ್ಧಿಯನ್ನು ನೀಡಿದ್ದೇವೆಯೇ ಹೊರತು ಸುಳ್ಳು ಗರೀಬಿ ಹಠಾವೊ ಘೋಷಣೆಯನ್ನಲ್ಲ: ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ನಾವು ನಿಜವಾದ ಅಭಿವೃದ್ಧಿಯನ್ನು ನೀಡಿದ್ದೇವೆಯೇ ಹೊರತು ಸುಳ್ಳು ಗರೀಬಿ ಹಠಾವೊ ಘೋಷಣೆಯನ್ನಲ್ಲ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಮಂಗಳವಾರ ಲೋಕಸಭೆಯಲ್ಲಿ ನಡೆದ ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಬಡತನ ನಿರ್ಮೂಲನೆಯಲ್ಲಿನ ಸಾಧನೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ತಮ್ಮ ಸರಕಾರದ ವಿಕಸಿತ ಭಾರತದ ದೂರದೃಷ್ಟಿಯ ಕುರಿತು ಒತ್ತಿ ಹೇಳಿದರು.
ಇದೇ ವೇಳೆ ವಿರೋಧ ಪಕ್ಷಗಳ ನಾಯಕರ ಜೀವನ ಶೈಲಿಯಲ್ಲಿನ ವೈರುಧ್ಯದ ಕುರಿತು ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಅತ್ಯಗತ್ಯ ಸೇವೆಗಳೆಡೆಗಿನ ತಮ್ಮ ಆಡಳಿತದ ದೃಷ್ಟಿಕೋನವನ್ನು ಹೋಲಿಸಿದರು.
ಲೋಕಸಭೆಯಲ್ಲಿ 14ನೇ ಬಾರಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, “ಅದೃಷ್ಟವಶಾತ್ ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ಚರ್ಚೆಯಲ್ಲಿ ನಾನು 14ನೇ ಬಾರಿ ಉತ್ತರ ನೀಡುವ ಅವಕಾಶವನ್ನು ದೇಶದ ಜನತೆ ನೀಡಿದ್ದಾರೆ. ಹೀಗಾಗಿ, ನಾನು ಗೌರವಯುತವಾಗಿ ನನ್ನ ಕೃತಜ್ಞತೆಯನ್ನು ಜನರಿಗೆ ತಿಳಿಸುತ್ತೇನೆ” ಎಂದರು.
“ಐದು ದಶಕಗಳ ಕಾಲ ನೀವು ಬಡತನ ನಿರ್ಮೂಲನೆಯ ಘೋಷಣೆಯನ್ನು ಕೇಳಿದ್ದೀರಿ. ಆದರಿಂದು, 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ. ಯೋಜನೆಗಳನ್ನು ಅರ್ಪಣಾ ಮನೋಭಾವ, ಆಳವಾದ ಸಂವೇದನೆಯಿಂದ ಜಾರಿಗೊಳಿಸಿದಾಗ ಈ ಪರಿವರ್ತನೆಯಾಗುತ್ತದೆ” ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ಛೇಡಿಸಿದರು.