"ಸಮಸ್ಯೆಗಳ ಕುರಿತು ಧ್ವನಿ ಎತ್ತುವುದು ನಾಟಕವಲ್ಲ" : ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಪ್ರಿಯಾಂಕಾ ಗಾಂಧಿ (Photo: PTI)
ಹೊಸದಿಲ್ಲಿ: ಸಂಸತ್ತು ಭರವಸೆಗಳ ಈಡೇರಿಕೆಯ ವೇದಿಕೆಯೇ ಹೊರತು, ನಾಟಕದ ವೇದಿಕೆಯಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, "ಚುನಾವಣಾ ಪರಿಸ್ಥಿತಿ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಹಾಗೂ ವಾಯು ಮಾಲಿನ್ಯ ಬೃಹತ್ ಸಮಸ್ಯೆಗಳಾಗಿವೆ. ನಾವದನ್ನು ಚರ್ಚಿಸೋಣ. ಸಂಸತ್ತು ಇರುವುದು ಏನಕ್ಕೆ? ಅದು ನಾಟಕವಲ್ಲ. ಸಮಸ್ಯೆಗಳ ಕುರಿತು ಧ್ವನಿ ಎತ್ತುವುದು ಹಾಗೂ ಮಾತನಾಡುವುದು ನಾಟಕವಲ್ಲ. ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರಜಾಸತ್ತಾತ್ಮಕ ಚರ್ಚೆ ನಡೆಸಲು ನಾಟಕ ಅವಕಾಶ ನೀಡದಿರುವುದೇ ʼಡ್ರಾಮಾʼ" ಎಂದು ಟೀಕಿಸಿದ್ದಾರೆ.
ಗಂಭೀರ ವಿಷಯಗಳಾದ ಮತಪಟ್ಟಿಗಳ ವಿಶೇಷ ಮತಪಟ್ಟಿ ಪರಿಷ್ಕರಣೆ ಹಾಗೂ ದಿಲ್ಲಿಯಲ್ಲಿನ ವಾಯು ಮಾಲಿನ್ಯದ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುವುದು ನಾಟಕವಲ್ಲ ಎಂದು ಅವರು ಚಾಟಿ ಬೀಸಿದ್ದಾರೆ.
ಸಂಸತ್ ಅಧಿವೇಶನದ ಪ್ರಾರಂಭಕ್ಕೂ ಮುನ್ನ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಾಟಕದ ವೇದಿಕೆಯನ್ನಾಗಿಸಿಕೊಳ್ಳಬೇಡಿ. ನೀವು ಹೇಗೆ ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂಬ ಕುರಿತು ಸಲಹೆ ನಾನು ನಿಮಗೆ ನೀಡಬಲ್ಲೆ ಎಂದು ವಿರೋಧ ಪಕ್ಷಗಳನ್ನು ಪರೋಕ್ಷವಾಗಿ ಛೇಡಿಸಿದ್ದರು.







