ದೀರ್ಘಕಾಲದಿಂದ ಹೊರಗಿದ್ದ ಕೇರಳ ʼಪಿಎಂ ಶ್ರೀ ಯೋಜನೆʼಗೆ ಸೇರ್ಪಡೆ

ವಿ.ಶಿವನ್ ಕುಟ್ಟಿ(newindianexpress.com) , ನರೇಂದ್ರ ಮೋದಿ (PTI)
ತಿರುವನಂತಪುರ: ಅಸ್ತಿತ್ವದಲ್ಲಿರುವ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಹೊಂದಿರುವ ಕೇಂದ್ರದ ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ(ಪಿಎಂ ಶ್ರೀ) ಯೋಜನೆಗೆ ಸೇರಲು ತಾನು ನಿರ್ಧರಿಸಿರುವುದಾಗಿ ಕೇರಳದ ಸಿಪಿಎಂ ನೇತೃತ್ವದ ಸರಕಾರವು ಪ್ರಕಟಿಸಿದೆ.
ಪಿಎಂ ಶ್ರೀ ಯೋಜನೆಗೆ ಸೇರಲು ರಾಜ್ಯ ಸರಕಾರಕ್ಕೆ ಇಷ್ಟವಿದ್ದಿರಲಿಲ್ಲ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಈ ಯೋಜನೆಯು ದೇಶದಲ್ಲಿ ಶಿಕ್ಷಣದ ಕೇಸರೀಕರಣಕ್ಕೆ ಸಾಧನವಾಗಿದೆ ಹಾಗೂ ಶಾಲೆಗಳನ್ನು ಕೇಂದ್ರದ ನಿಯಂತ್ರಣಕ್ಕೆ ಒಳಪಡಿಸುತ್ತದೆ ಎಂದು ಅದು ಆರೋಪಿಸಿತ್ತು. ಕೇಂದ್ರ ಶಿಕ್ಷಣ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರಿಂದ ಕೇಂದ್ರ ಸರಕಾರವು ಕೇರಳದ ಸಾರ್ವತ್ರಿಕ ಶಿಕ್ಷಣ ಕ್ಷೇತ್ರಕ್ಕೆ 1,000 ಕೋಟಿ ರೂ.ಗೂ ಅಧಿಕ ಮೊತ್ತದ ಬಿಡುಗಡೆಯನ್ನು ತಡೆಹಿಡಿದಿತ್ತು.
‘ಕೇಂದ್ರದಿಂದ ನಮಗೆ ಬರಬೇಕಾದ 1,466 ಕೋಟಿ ರೂ.ಬಾಕಿ ಇದೆ. ಅದು ನಮ್ಮ ಮಕ್ಕಳಿಗಾಗಿ ವೆಚ್ಚ ಮಾಡಬೇಕಾದ ಹಣವಾಗಿದೆ. ನಾವು ಈ ಹಣವನ್ನು ಪಡೆದರೆ ಮಾತ್ರ
ವಿದ್ಯಾರ್ಥಿಗಳಿಗೆ ಅನುದಾನ ಮತ್ತು ಶಿಕ್ಷಕರಿಗೆ ವೇತನದಂತಹ ಹಲವಾರು ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತದೆ. ಆರೋಗ್ಯ ಮತ್ತು ಕೃಷಿಯಂತಹ ಇತರ ಇಲಾಖೆಗಳೂ ಕೇಂದ್ರದ ನೆರವನ್ನು ಸ್ವೀಕರಿಸಿವೆ. ಕೇಂದ್ರ ಸರಕಾರದ ನಿಧಿ ದೇಶದ ಎಲ್ಲರಿಗೂ ಸೇರಿದ್ದಾಗಿದೆ. ನಾವೇಕೆ ದೂರವಿರಬೇಕು?’ ಎಂದು ರವಿವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಸಿಪಿಎಂ ನಾಯಕ ಹಾಗೂ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಹೇಳಿದರು.
‘ಕೇಂದ್ರ ಸರಕಾರವು ಕ್ಷುಲ್ಲಕ ಕಾರಣಗಳಿಂದ ನೆರವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಕೇಂದ್ರದ ನೆರವನ್ನು ಸ್ವೀಕರಿಸಿದರೂ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದನ್ನು ಮುಂದುವರಿಸುತ್ತೇವೆ. ನಮಗೆ ಒಂದು ನೀತಿಯಿದೆ ಮತ್ತು ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ’ ಎಂದರು.
ಪಿಎಂ ಶ್ರೀ ಯೋಜನೆಯ ಪ್ರಕಾರ ಕೇಂದ್ರದ ಇತರ ಯೋಜನೆಗಳಂತೆ ರಾಜ್ಯಗಳು ಯೋಜನಾ ವೆಚ್ಚದ ಶೇ.40ರಷ್ಟನ್ನು ಭರಿಸಬೇಕಾಗುತ್ತದೆ. ಈವರೆಗೆ ದೇಶಾದ್ಯಂತ 670 ಜಿಲ್ಲೆಗಳಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಮಾಧ್ಯಮಿಕ ಹಂತದವರೆಗಿನ 12,400 ಶಾಲೆಗಳು ಈ ಯೋಜನೆಗೆ ಸೇರ್ಪಡೆಗೊಂಡಿವೆ. ಆದರೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಂತೆ ಕೇರಳ ರಾಜ್ಯ ಮಂಡಳಿಯಡಿಯ ಶಾಲೆಗಳು ಈವರೆಗೆ ಯೋಜನೆಯ ಭಾಗವಾಗಿರಲಿಲ್ಲ.







