ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ರ್ಯಾಲಿಯಲ್ಲಿ ಪ್ರಧಾನಿ ತಾಯಿಗೆ ಅವಮಾನ : ಬಿಜೆಪಿ ಆರೋಪ

ಸಾಂದರ್ಭಿಕ ಚಿತ್ರ (File Photo: PTI)
ಪಾಟ್ನಾ: ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ದಿವಂಗತ ಹೀರಾಬೆನ್ ಮೋದಿ ಅವರನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಬಿಹಾರ ಘಟಕ ಎಕ್ಸ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ತೇಜಸ್ವಿ ಯಾದವ್ ಆರ್ಜೆಡಿ ಪಕ್ಷದ ರ್ಯಾಲಿಯ ವೇದಿಕೆಯಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ವ್ಯಕ್ತಿಯೋರ್ವ ಪ್ರಧಾನಿ ಮತ್ತು ಅವರ ತಾಯಿಯನ್ನು ನಿಂದಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
“ಆರ್ಜೆಡಿ ಕಾರ್ಯಕರ್ತರು ನಿಂದನೀಯ ಘೋಷಣೆಗಳನ್ನು ಕೂಗುವಾಗ ತೇಜಸ್ವಿ ಯಾದವ್ ಅವರನ್ನು ಪ್ರೋತ್ಸಾಹಿಸಿದರು. ಇತ್ತೀಚಿನ ದಿನಗಳಲ್ಲಿ ಆರ್ಜೆಡಿ -ಕಾಂಗ್ರೆಸ್ ರ್ಯಾಲಿಗಳು ಒಂದೇ ಕಾರ್ಯಸೂಚಿಯನ್ನು ಹೊಂದಿವೆ. ತಾಯಂದಿರು ಮತ್ತು ಸಹೋದರಿಯರ ಮೇಲೆ ದೌರ್ಜನ್ಯ ಮತ್ತು ನಿಂದನೆ ಮುಂದುವರಿದಿದೆ. ಬಿಹಾರದ ತಾಯಂದಿರು ಮತ್ತು ಸಹೋದರಿಯರು ಎಲ್ಲಾ ನಿಂದನೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಬಿಜೆಪಿ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಆರೋಪಿಸಿದೆ.
ವೈರಲ್ ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಆರ್ಜೆಡಿ, ವಿಧಾನಸಭಾ ಚುನಾವಣೆಗೆ ಮುನ್ನ ಆರ್ಜೆಡಿಯ ಮಾನಹಾನಿ ಮಾಡಲು ಬಿಜೆಪಿ ತಿರುಚಿದ ವೀಡಿಯೊವನ್ನು ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಿದೆ.





