ಪಿಎನ್ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಮೆಹುಲ್ ಚೋಕ್ಸಿ | Photo Credit : NDTV
ಹೊಸದಿಲ್ಲಿ: ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ (ಎಫ್ಇಒ) ಎಂದು ಘೋಷಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆಯನ್ನು ಕೈ ಬಿಡುವಂತೆ ಕೋರಿ ವಜ್ರೋದ್ಯಮಿ ಮೆಹಲು ಚೋಕ್ಸಿ ಸಲ್ಲಿಸಿದ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿಗೆ ಇದು ಅತಿ ದೊಡ್ಡ ಹಿನ್ನಡೆಯಾಗಿದೆ.
ಈ ವರ್ಷ ಎಪ್ರಿಲ್ನಲ್ಲಿ ಬೆಲ್ಚಿಯಮ್ನಲ್ಲಿ ಬಂಧನವಾದ ಬಳಿಕ ಚೋಕ್ಸಿ, ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಈ.ಡಿ.) ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸುವಂತೆ ಪಿಎಂಎಲ್ಎ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಭಾರತದಲ್ಲಿ ಬಾಕಿ ಇರುವ ಪ್ರಕರಣಗಳ ಹಿನ್ನೆಲೆಯಲ್ಲಿ ತಾನು ಈಗ ಅಧಿಕಾರಿಗಳ ಬಂಧನದಲ್ಲಿದ್ದೇನೆ. ಈ ಪ್ರಕರಣಗಳಿಗಾಗಿ ತನ್ನನ್ನು ಹಸ್ತಾಂತರಿಸುವಂತೆ ಭಾರತದ ಅಧಿಕಾರಿಗಳು ಬೆಲ್ಜಿಯಂ ರಾಷ್ಟ್ರಕ್ಕೆ ಮನವಿ ಮಾಡಿದ್ದಾರೆ ಎಂದು ಚೋಕ್ಸಿ ಹೇಳಿದರು.
ತಾನು ಭಾರತದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳ ವಶದಲಿದ್ದೇನೆ. ಆದುದರಿಂದ ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿ ತಿರಸ್ಕರಿಸಲು ಅರ್ಹವಾಗಿದೆ ಎಂದು ಅವರು ಹೇಳಿದರು.
ಜಾರಿ ನಿರ್ದೇಶನಾಲಯ ಚೋಕ್ಸಿ ಅವರ ಮನವಿಯನ್ನು ವಿರೋಧಿಸಿತು. ಚೋಕ್ಸಿ ಬೆಲ್ಚಿಯಂನಲ್ಲಿ ಗಡಿಪಾರಿನ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಅವರು ಭಾರತಕ್ಕೆ ಮರಳಲು ಬಯಸುವುದಿಲ್ಲ ಎಂದು ಅದು ಹೇಳಿತು.







