ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ: ಹಿಮಾಚಲದ ಬಿಜೆಪಿ ಶಾಸಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಹಂಸರಾಜ್ | PC : indianexpress.com \ Facebook
ಶಿಮ್ಲಾ,ನ.8: ಹಿಮಾಚಲಪ್ರದೇಶದ ಬಿಜೆಪಿ ಶಾಸಕ ಹಂಸರಾಜ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ)ಯಡಿ ರಾಜ್ಯದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಹಂಸರಾಜ್ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಪೊಲೀಸರು ಈ ಕ್ರಮವನ್ನು ಕೈಗೊಂಡಿದ್ದಾರೆ.
ಚಂಬಾ ಜಿಲ್ಲೆಯ ಚುರಾಹ್ ವಿಧಾನಸಭಾ ಕ್ಷೇತ್ರದ ಶಾಸಕರಾದ 42 ವರ್ಷದ ಹಂಸರಾಜ್ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಹಾಗೂ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 69 ( ವಂಚನೆಯ ವಿಧಾನಗಳಿಂದ ಲೈಂಗಿಕ ಸಂಪರ್ಕ) ರ ಅಡಿ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಹಂಸರಾಜ್ ವಿರುದ್ಧ ಚಂಬಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಳೆದ ವಾರ ದೂರುದಾರ ಮಹಿಳೆಯು ಫೇಸ್ಬುಕ್ನಲ್ಲಿ ವೀಡಿಯೊವೊಂದನ್ನು ನೇರ ಪ್ರಸಾರ ಮಾಡಿದ್ದು, ಅದರಲ್ಲಿ ಶಾಸಕ ಹಂಸರಾಜ್ ಹಾಗೂ ಅವರ ಸಹಾಯಕರ ವಿರುದ್ಧ ಲೈಂಗಿಕ ಶೋಷಣೆ ಹಾಗೂ ಬೆದರಿಕೆಯ ಗಂಭೀರ ಆರೋಪಗಳನ್ನು ಮಾಡಿದ್ದರು. ತನ್ನ ಆರೋಪವನ್ನು ಸಮರ್ಥಿಸುವ ಪುರಾವೆಗಳು ತನ್ನ ಬಳಿಯಿರುವುದಾಗಿಯೂ ಆಕೆ ಹೇಳಿದ್ದಾರೆ. ಬಿಜೆಪಿ ಶಾಸಕನು ತನ್ನ ಕುಟುಂಬವನ್ನು ಭಗ್ನಗೊಳಿಸಿದ್ದಾನೆ ಹಾಗೂ ತನಗೆ ಜೀವಕ್ಕೆ ಅಪಾಯವಿದೆಯೆಂದು ಆಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಳಿಕ ಸಂತ್ರಸ್ತ ಮಹಿಳೆಯ ತಂದೆಯು ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಶಾಸಕನ ಸಹಾಯಕರು ತಮ್ಮನ್ನು ಅಪಹರಿಸಿದ್ದು, ತನ್ನ ಮೊಬೈಲ್ ಪೋನ್ ಗಳನ್ನು ಮುರಿದುಹಾಕಿದ್ದಾರೆ ಮತ್ತು ಒಂದು ವೇಳೆ ಪ್ರಕರಣವನ್ನು ಹಿಂಪಡೆಯದೆ ಇದ್ದಲ್ಲಿ ಮನೆಗೆ ಬೆಂಕಿಹಚ್ಚುವುದಾಗಿಯೂ ಬೆದರಿಕೆಯೊಡ್ಡಿದ್ದಾರೆಂದು ಆಪಾದಿಸಿದ್ದಾರೆ.
ಈ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿ, ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗಿದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆಯೆಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 6ರಂದು ಸಂತ್ರಸ್ತೆಯ ತಂದೆಯು ಪೊಲೀಸರಿಗೆ ದೂರು ನೀಡಿ, ಹಂಸರಾಜ್ ಹಾಗೂ ಅವರ ಖಾಸಗಿ ಕಾರ್ಯದರ್ಶಿ ಲೇಖರಾಜ್ ಹಾಗೂ ಸಂಗಡಿಗ ಮುನಿಯಾನ್ ಖಾನ್, ಬಲವಂತವಾಗಿ ತನ್ನನ್ನು ಹಾಗೂ ತನ್ನ ಪುತ್ರಿಯನ್ನು ಬಲವಂತವಾಗಿ ಶಿಮ್ಲಾಕ್ಕೆ ಕೊಂಡೊಯ್ದಿದ್ದರು ಮತ್ತು ಆರೋಪವನ್ನು ಹಿಂಪಡೆಯದೆ ಇದ್ದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತೆಂದು ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದಾರೆ.







