ತ್ವರಿತ ವಿಶೇಷ ನ್ಯಾಯಾಲಯಗಳಿಂದ 3.25 ಲಕ್ಷ ಪೊಕ್ಸೊ ಪ್ರಕರಣಗಳ ಇತ್ಯರ್ಥ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.1: ದೇಶಾದ್ಯಂತ 405 ವಿಶೇಷ ಪೊಕ್ಸೊ ನ್ಯಾಯಾಲಯಗಳು ಸೇರಿದಂತೆ ಒಟ್ಟು 740 ತ್ವರಿತಗತಿಯ ವಿಚಾರಣಾ ನ್ಯಾಯಾಲಯಗಳು 3.25 ಲಕ್ಷಕ್ಕಿಂತಲೂ ಅಧಿಕ ಪೊಕ್ಸೋ ಪ್ರಕರಣಗಳನ್ನು ವಿಲೇವಾರಿ ಮಾಡಿರುವುದಾಗಿ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ಶುಕ್ರವಾರ ಲೋಕಸಭೆಗೆ ತಿಳಿಸಿದೆ.
ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಲು ತ್ವರಿತಗತಿಯ ವಿಶೇಷ ನ್ಯಾಯಾಲಯ (ಎಫ್ಟಿಎಸ್ಸಿ)ಗಳನ್ನು ರಚಿಸಲಾಗಿತ್ತೆಂದು ಸಚಿವಾಲಯವು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದೆ.
2025ರ ಎಪ್ರಿಲ್ 30ರವರೆಗೆ ಈ ನ್ಯಾಯಾಲಯಗಳು 3.25 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಿವೆ. 90 ಸಾವಿರ ಪೊಕ್ಸೊ ಪ್ರಕರಣಗಳ ವಿಲೇವಾರಿಯೊಂದಿಗೆ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ. 31 ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಮಧ್ಯಪ್ರದೇಶ ದ್ವಿತೀಯ ಹಾಗೂ 25 ಸಾವಿರಕ್ಕೂ ಅಧಿಕ ಪ್ರಕರಣಗಳೊಂದಿಗೆ ಕೇರಳ ತೃತೀಯ ಸ್ಥಾನದಲ್ಲಿವೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸ ಇಲಾಖೆಯ ಸಹಾಯಕ ಸಚಿವೆ ಸಾವಿತ್ರಿ ಠಾಕೂರ್ ಸದನದಲ್ಲಿ ಪ್ರಕಟಿಸಿದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಬಾಲ್ಯದ ಆರಂಭದಲ್ಲೇ ಮಕ್ಕಳ ಪಾಲನೆ, ಶಿಕ್ಷಣ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸುವ ಉದ್ದೇಶದಿಂದ ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆಯೆಂದು ಠಾಕೂರ್ ಅವರು ತಿಳಿಸಿದ್ದಾರೆ.
‘‘ ಪೊಲೀಸ್ ಠಾಣೆಗಳು ಮಹಿಳಾ ಸ್ನೇಹಿಯಾಗುವುದನ್ನು ಖಾತರಿಪಡಿಸಲು ದೇಶಾದ್ಯಂತ 14,658 ಮಹಿಳಾ ಹೆಲ್ಪ್ಡೆಸ್ಕ್ (ಡಬ್ಲ್ಯುಎಚ್ಡಿ)ಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 13,743 ಹೆಲ್ಪ್ ಡೆಸ್ಕ್ಗಳ ನೇತೃತ್ವವನ್ನು ಮಹಿಳಾ ಪೊಲೀಸ್ ಅಧಿಕಾರಿಗಳೇ ಹೊಂದಿದ್ದಾರೆಂದು ಸಾವಿತ್ರಿ ಠಾಕೂರ್ ತಿಳಿಸಿದರು. ನಿರ್ಗತಿಕ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವು ಹಾಗೂ ಬೆಂಬಲ ನೀಡಲು ತುರ್ತು ಪ್ರಕ್ರಿಯಾ ನೆರವು ವ್ಯವಸ್ಥೆ (ಇಆರ್ಎಸ್ಎಸ್-112) ಅನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಲ್ಲಿ ವಿವಿಧ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸ್ಥಾಪಿಸಲಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ.
ಸ್ಥಾಪನೆಯಾಗಿನಿಂದ ತುರ್ತು ಪ್ರತಿಕ್ರಿಯಾ ನೆರವು ವ್ಯವಸ್ಥೆಯು ಈತನಕ 43 ಕೋಟಿ ಕರೆಗಳನ್ನು ನಿಭಾಯಿಸಿದೆ. ಇದರ ಜೊತೆಗೆ ಮಹಿಳಾ ಹೆಲ್ಪ್ಲೈನ್ (ಡಬ್ಲ್ಯುಎಚ್ಎಲ್-181) ಕೂಡಾ ಪಶ್ಚಿಮ ಬಂಗಾಳ ಹೊರತುಪಡಿಸಿ 35 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿವೆ.ಈವರೆಗೆ ಮಹಿಳಾ ಸಹಾಯವಾಣಿಗಳು 2.10 ಕೋಟಿ ಕರೆಗಳನ್ನು ನಿರ್ವಹಿಸಿವೆ ಹಾಗೂ 84.43 ಲಕ್ಷ ಮಹಿಳೆಯರಿಗೆ ನೆರವಾಗಿವೆ’’ ಎಂದು ಸಚಿವೆ, ಇನ್ನೊಂದು ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ.







