ಅತ್ಯಾಚಾರಗಳನ್ನು ಪೊಲೀಸರೇ ಏಕಾಂಗಿಯಾಗಿ ತಡೆಗಟ್ಟಲು ಸಾಧ್ಯವಿಲ್ಲ: ಮಧ್ಯಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯಿಂದ ವಿವಾದಾತ್ಮಕ ಹೇಳಿಕೆ

ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಕೈಲಾಶ್ ಮಕ್ವಾನಾ (Photo credit: India Today)
ಭೋಪಾಲ್: “ಅತ್ಯಾಚಾರಗಳನ್ನು ಪೊಲೀಸರೇ ಏಕಾಂಗಿಯಾಗಿ ತಡೆಗಟ್ಟಲು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿರುವ ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಕೈಲಾಶ್ ಮಕ್ವಾನಾ, “ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರಲು ಅಂತರ್ಜಾಲ ಬಳಕೆ, ಮೊಬೈಲ್ ಫೋನ್ ಗಳು, ಮದ್ಯಪಾನ ಹಾಗೂ ಕುಸಿಯುತ್ತಿರುವ ನೈತಿಕ ಮೌಲ್ಯಗಳು ಕಾರಣ ಎಂದು ದೂಷಿಸಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರ ಹಿಂದಿನ ಕಾರಣವೇನು ಎಂಬ ಪ್ರಶ್ನೆಗೆ, ಜನರಿಗೆ ಮೊಬೈಲ್ ಫೋನ್ ಗಳು ಹಾಗೂ ಅಂತರ್ಜಾಲ ಸೇವೆ ವ್ಯಾಪಕವಾಗಿ ಲಭ್ಯವಾಗುತ್ತಿರುವುದರಿಂದ, ಅವರಿಗೆ ಅಶ್ಲೀಲ ತುಣುಕುಗಳಿಗೆ ಸುಲಭವಾಗಿ ಪ್ರವೇಶ ದೊರೆಯುತ್ತಿದೆ ಎಂದು ಉಜ್ಜಯಿನಿಯಲ್ಲಿ ಆಯೋಜನೆಗೊಂಡಿದ್ದ ವಿಭಾಗೀಯ ಪರಾಮರ್ಶೆ ಸಭೆಯಲ್ಲಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
“ಈ ಪ್ರವೃತ್ತಿಗೆ ಹಲವಾರು ಕಾರಣಗಳಿವೆ. ನನ್ನ ಪ್ರಕಾರ, ಇದಕ್ಕೆ ಅಂತರ್ಜಾಲ ಸೇವೆ, ಮೊಬೈಲ್ ಫೋನ್ ಗಳು, ಅಶ್ಲೀಲ ತುಣುಕುಗಳ ಲಭ್ಯತೆ, ಮದ್ಯಪಾನ ಹಾಗೂ ಮೊಬೈಲ್ ಫೋನ್ ಗಳ ಮೂಲಕ ಜನರು ಹೇಗೆ ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಸಂಪರ್ಕಗೊಳ್ಳಲಿದ್ದಾರೆ ಎಂಬುದು ಕಾರಣವಾಗಿದೆ. ಸಮಾಜದ ನೈತಿಕ ಮೌಲ್ಯಗಳಲ್ಲಿ ಕುಸಿತವುಂಟಾಗಿದೆ. ಇವೆಲ್ಲ ಅತ್ಯಾಚಾರ ಪ್ರಕರಣಗಳಲ್ಲಿನ ಏರಿಕೆಗೆ ಕೊಡುಗೆ ನೀಡುತ್ತಿರುವ ಸಂಗತಿಗಳಾಗಿವೆ” ಎಂದು ಅವರು ವಿವರಿಸಿದ್ದಾರೆ.





