ಕೇರಳ | ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆರೋಪ : ಪತ್ರಕರ್ತ ಸಿದ್ದಿಕ್ ಕಪ್ಪನ್ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲು

ಪತ್ರಕರ್ತ ಸಿದ್ದಿಕ್ ಕಪ್ಪನ್
ಕೊಚ್ಚಿ: ಪತ್ರಕರ್ತ ರೆಜಾಝ್ ಎಂ.ಶೀಬಾ ಸೈದೀಕ್ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಚಲನವಲನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪತ್ರಕರ್ತ ಸಿದ್ದಿಕ್ ಕಪ್ಪನ್ ಸೇರಿದಂತೆ 10 ಮಂದಿಯ ವಿರುದ್ಧ ರವಿವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ಸಂಜೆ ಕೇರಳ ಹೈಕೋರ್ಟ್ ಜಂಕ್ಷನ್ ಬಳಿಯಿರುವ ವಂಚಿ ಚೌಕದ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಹಾಗೂ ವೆಲ್ಫೇರ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಟೀಕಿಸಿದ್ದಾರೆ ಎಂದು ಆರೋಪಿಸಿ ಯುಎಪಿಎಯಡಿ ಪ್ರಕರಣ ದಾಖಲಿಸಿ ಕೇರಳ ಮೂಲದ ಪತ್ರಕರ್ತ ಸೈದೀಕ್ ರನ್ನು ನಾಗಪುರದಲ್ಲಿ ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂಬಂಧ ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಇತರ 10 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಎಫ್ಐಆರ್ ಪ್ರಕಾರ, ಸುಮಾರು 30 ಮಂದಿ ವಂಚಿ ಚೌಕದೆದುರು ಶನಿವಾರ ಸಂಜೆ 4 ಗಂಟೆಗೆ ಜಮಾಯಿಸಿ, ಯುಎಪಿಎ ಕಾಯ್ದೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನುಮತಿ ಇಲ್ಲದೆ ಮೈಕ್ರೊಫೋನ್ ಹಾಗೂ ಧ್ವನಿವರ್ಧಕಗಳನ್ನು ಬಳಸುವ ಮೂಲಕ ಪಾದಚಾರಿಗಳ ಓಡಾಟಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ.
ನೀಹಾರಿಕಾ ಪ್ರದೌಶ್, ಸಿದ್ದಿಕ್ ಕಪ್ಪನ್, ಪ್ರಮೋದ್ ಪುಳಂಗರ, ಅಂಬಿಕಾ, ಸಿ.ಪಿ.ರಶೀದ್, ಸಾಜಿದ್ ಖಾಲಿದ್, ಬಾಬುರಾಜ್ ಭಗವತಿ, ವಿ.ಎಂ.ಫೈಸಲ್, ಮೃದುಲಾ ಭವಾನಿ, ಡಾ. ಹರಿ ಹಾಗೂ ಶನೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಕೇರಳ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







