ಮಿಯಾ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ವಿರುದ್ಧ ಪೋಲಿಸ್ ದೂರು ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Photo: PTI)
ಹೊಸದಿಲ್ಲಿ: ಮಿಯಾ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆಗಳಿಗಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ವಿರುದ್ಧ ಪೋಲಿಸ್ ದೂರು ದಾಖಲಾಗಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಅವರೂ ಶರ್ಮಾರ ಹೇಳಿಕೆಗಳನ್ನು ಖಂಡಿಸಿದ್ದು, ಭಯ,ಬಹಿಷ್ಕಾರ ಮತ್ತು ದ್ವೇಷವನ್ನು ಹರಡುವ ಮೂಲಕ ಶರ್ಮಾ ಭಾರತೀಯ ಗಣರಾಜ್ಯದ ಅಡಿಪಾಯವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶರ್ಮಾ ಅವರು ಮಂಗಳವಾರ ಬಹಿರಂಗವಾಗಿ ನೀಡಿದ ಹೇಳಿಕೆಗಳು ಅಸ್ಸಾಮಿನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ದ್ವೇಷ, ಕಿರುಕುಳ ಮತ್ತು ತಾರತಮ್ಯವನ್ನು ಉತ್ತೇಜಿಸುತ್ತಿವೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ಹರ್ಷ ಮಂದರ್ ಅವರು ಶರ್ಮಾ ವಿರುದ್ಧ ಪೋಲೀಸ್ ದೂರನ್ನು ದಾಖಲಿಸಿದ್ದಾರೆ.
ತ್ವರಿತ ಕ್ರಮಕ್ಕಾಗಿ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ಕಲಮ್ಗಳಡಿ ಎಫ್ಐಆರ್ ದಾಖಲಿಸುವಂತೆ ಅವರು ಆಗ್ರಹಿಸಿದ್ದಾರೆ.
ಅಸ್ಸಾಮಿನಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ನಡೆಯುತ್ತಿರುವುದರಿಂದ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ತಡೆಗಟ್ಟಲು ಸೂಕ್ತ ತನಿಖೆಯನ್ನು ನಡೆಸಬೇಕು ಮತ್ತು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂದರ್ ದೂರಿನಲ್ಲಿ ಕೋರಿದ್ದಾರೆ.
ದಿಲ್ಲಿಯ ಹೌಜ್ ಖಾಸ್ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವುದಾಗಿ ಮಂದರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರ ದೂರಿಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿಯಾಗಿದೆಯೇ ಎನ್ನುವ ಕುರಿತು ಮಾಹಿತಿಯಿಲ್ಲ ಎಂದು thewire.in ವರದಿ ಮಾಡಿದೆ.
ಮಂಗಳವಾರ ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯ ದಿಗ್ಬೋಯಿಯಲ್ಲಿ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ‘ಮಿಯಾಗಳು’ ಎಂದು ಬಣ್ಣಿಸಿದ್ದ ಶರ್ಮಾ,ಅವರಿಗೆ ಕಿರುಕುಳ ,ಅವರ ವಿರುದ್ಧ ತಾರತಮ್ಯ ಮತ್ತು ಮತದಾರರ ಪಟ್ಟಿಗಳಿಂದ ಅವರ ಹೆಸರುಗಳ ಅಳಿಸುವಿಕೆಯನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮಂದರ್ ಹೇಳಿದ್ದಾರೆ.
ಮತದಾರರ ಪಟ್ಟಿಗಳ ಪರಿಷ್ಕರಣೆ ಸಂದರ್ಭದಲ್ಲಿ ಮಿಯಾ ಮುಸ್ಲಿಮರ ವಿರುದ್ಧ ದೂರುಗಳ ಮತ್ತು ಆಕ್ಷೇಪಗಳನ್ನು ಸಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ನಿರ್ದೇಶನ ನೀಡಿರುವುದಾಗಿ ಶರ್ಮಾ ಒಪ್ಪಿಕೊಂಡಿದ್ದಾರೆ ಎಂದೂ ಮಂದರ್ ಹೇಳಿಕೆಯಲ್ಲಿ ಬೆಟ್ಟು ಮಾಡಿದ್ದಾರೆ.







