ಅಸ್ಸಾಂನಲ್ಲಿ ಅಂತರ್-ಧರ್ಮೀಯ ಭೂ ವರ್ಗಾವಣೆಗೆ ಪೊಲೀಸ್ ಪರಿಶೀಲನೆ ಕಡ್ಡಾಯ!

PC | PTI
ಗುವಾಹಟಿ, ಆ. 28: ಅಸ್ಸಾಂ ರಾಜ್ಯದಲ್ಲಿ ಭೂಮಿಯ ಅಂತರ್-ಧರ್ಮೀಯ ವರ್ಗಾವಣೆಗಳಿಗೆ ಪೊಲೀಸ್ ಪರಿಶೀಲನೆ ಕಡ್ಡಾಯಗೊಳಿಸುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬುಧವಾರ ಅನುಮೋದನೆ ನೀಡಿದೆ ಎಂದು deccanherald.com ವರದಿ ಮಾಡಿದೆ.
ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು (SOPs) ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಹಿಂದೂಗಳಿಂದ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ, ಸಿಖ್ಖರಿಗೆ ಅಥವಾ ಬೌದ್ಧರಿಗೆ ಭೂಮಿಯ ವರ್ಗಾವಣೆಯಾಗುವ ಸಂದರ್ಭಗಳಲ್ಲಿ ಪೊಲೀಸರ ಪರಿಶೀಲನೆ ಕಡ್ಡಾಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಆದರೆ ಒಂದೇ ಧರ್ಮದವರ ನಡುವೆ ನಡೆಯುವ ಭೂಮಿಯ ಮಾರಾಟಕ್ಕೆ ಈ ನಿಯಮ ಅನ್ವಯಿಸುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರಿಶೀಲನೆಯ ಹಂತಗಳು
ಶರ್ಮಾ ವಿವರಿಸಿದಂತೆ, ಅಂತರ್-ಧರ್ಮೀಯ ಭೂ ವರ್ಗಾವಣೆಯ ಅರ್ಜಿಯನ್ನು ಮೊದಲು ಜಿಲ್ಲಾಧಿಕಾರಿ ಸ್ವೀಕರಿಸುತ್ತಾರೆ. ನಂತರ ಅದನ್ನು ಕಂದಾಯ ಇಲಾಖೆಯ ನೋಡಲ್ ಅಧಿಕಾರಿಗೆ ಕಳುಹಿಸಲಾಗುತ್ತದೆ. ಅವರು ಅರ್ಜಿಯನ್ನು ವಿಶೇಷ ಪೊಲೀಸರಿಗೆ ಹಸ್ತಾಂತರಿಸುತ್ತಾರೆ. ಈ ಹಂತದಲ್ಲಿ ನಾಲ್ಕು ಪ್ರಮುಖ ಅಂಶಗಳ ಪರಿಶೀಲನೆ ನಡೆಯಲಿದೆ.
ಮೊದಲ ಹಂತದಲ್ಲಿ ಭೂ ವರ್ಗಾವಣೆಯಲ್ಲಿ ವಂಚನೆ, ಬಲವಂತ ಅಥವಾ ಅಕ್ರಮ ಚಟುವಟಿಕೆಗಳಿವೆಯೇ ಎಂಬ ಕುರಿತು ಪರಿಶೀಲಿಸಲಾಗುತ್ತದೆ.
ಬಳಿಕ ಭೂಮಿ ಖರೀದಿಸಲು ಬಳಸುವ ಹಣದ ಮೂಲವನ್ನು ತಿಳಿಯಲಾಗುತ್ತದೆ. ಬಿಳಿ ಹಣವೋ ಅಥವಾ ಕಪ್ಪು ಹಣವೋ ಎಂಬುದು ಈ ವೇಳೆ ತಿಳಿಯಲಿದೆ.
ಒಂದು ವೇಳೆ ಭೂಮಿ ವರ್ಗಾವಣೆಯಾದರೆ ಸ್ಥಳೀಯ ಸಾಮಾಜಿಕ ಒಗ್ಗಟ್ಟಿನ ಮೇಲೆ ಬೀರುವ ಪರಿಣಾಮ ಕುರಿತೂ ಪರಿಶೀಲನೆ ನಡೆಯಲಿದೆ.
ಅಂತಿಮವಾಗಿ ರಾಷ್ಟ್ರೀಯ ಭದ್ರತೆಗೆ ಸಂಭವನೀಯ ಅಪಾಯದ ಕುರಿತು ಪೊಲೀಸರು ಪರಿಶೀಲಿಸಲಿದ್ದಾರೆ.
ಇಷ್ಟೆಲ್ಲಾ ಪರಿಶೀಲನೆ ಪೂರ್ಣಗೊಂಡ ಬಳಿಕ, ಫೈಲ್ ಮತ್ತೆ ಜಿಲ್ಲಾಧಿಕಾರಿಯವರಿಗೆ ಹಿಂತಿರುಗುತ್ತದೆ. ಅವರು ಭೂಮಿಯ ವರ್ಗಾವಣೆಗೆ ಅನುಮತಿ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ.
ಎನ್ಜಿಒಗಳಿಗೆ ಕಟ್ಟುನಿಟ್ಟಿನ ನಿಯಮಗಳು
ರಾಜ್ಯದ ಹೊರಗಿನ ಎನ್ಜಿಒಗಳು ಅಸ್ಸಾಂನಲ್ಲಿ ಭೂಮಿ ಖರೀದಿಸಲು ಬಯಸಿದರೂ ಇದೇ SOP ಅನ್ವಯವಾಗಲಿದೆ. "ಇತ್ತೀಚೆಗೆ ಕೇರಳದ ಕೆಲವು ಎನ್ಜಿಒಗಳು ಅಸ್ಸಾಂನಲ್ಲಿ ಭೂಮಿಯನ್ನು ಖರೀದಿಸಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ. ಆದ್ದರಿಂದ, ಹೊರಗಿನ ಯಾವುದೇ ಎನ್ಜಿಒಗಳು ಶಿಕ್ಷಣ ಸಂಸ್ಥೆ, ನರ್ಸಿಂಗ್ ಅಥವಾ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಭೂಮಿ ಖರೀದಿಸಲು ಬಯಸಿದರೂ, ಈ ಕಾರ್ಯವಿಧಾನವನ್ನು ಅನುಸರಿಸಲೇಬೇಕು," ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ವಿರೋಧ ಪಕ್ಷಗಳ ಆಕ್ರೋಶ
ಈ ನಿರ್ಧಾರವು ಬಂಗಾಳಿ ಭಾಷೆಯ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ತೆರವು ಕಾರ್ಯಾಚರಣೆಗಳ ನಡುವೆಯೇ ಪ್ರಕಟವಾಗಿರುವುದರಿಂದ, ವಿರೋಧ ಪಕ್ಷಗಳು ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿವೆ.
ಗುವಾಹಟಿ ಹೈಕೋರ್ಟ್ನ ವಕೀಲ ಅಮನ್ ವಾದುದ್ ಅವರು SOP ಗಳು ತಾರತಮ್ಯದ ಕ್ರಮವಾಗಿದ್ದು, ಭಾರತೀಯ ಸಂವಿಧಾನದ ಸಮಾನ ಹಕ್ಕುಗಳ ತತ್ವಕ್ಕೆ ವಿರುದ್ಧವೆಂದು ಟೀಕಿಸಿದ್ದಾರೆ.
"ಅಂತರ್-ಧರ್ಮೀಯ ಭೂ ವರ್ಗಾವಣೆಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬ ವಾದಕ್ಕೆ ಯಾವುದೇ ನಿಖರ ದತ್ತಾಂಶವಿದೆಯೇ? ಒಂದೇ ಧರ್ಮದವರ ನಡುವೆ ಮಾರಾಟಕ್ಕೆ ಈ ನಿಯಮ ಅನ್ವಯಿಸದೇ, ಬೇರೆ ಧರ್ಮದವರ ನಡುವೆ ಮಾತ್ರ ಅನ್ವಯಿಸುವುದು ಅಸಮಾನ ಪ್ರಕ್ರಿಯೆ," ಎಂದು ಅವರು ಹೇಳಿದ್ದಾರೆ.
ರಾಜಕೀಯ ಉದ್ದೇಶದ ಆರೋಪ
ವಿರೋಧ ಪಕ್ಷಗಳು ಈ ಕ್ರಮವನ್ನು ಬಿಜೆಪಿಯ ಧ್ರುವೀಕರಣ ತಂತ್ರದ ಭಾಗವೆಂದು ಆರೋಪಿಸಿವೆ. "ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಬಿಜೆಪಿ ಧಾರ್ಮಿಕ ತಾರತಮ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ," ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ.







