ಕೇರಳ | ಮಹಿಳೆಯರೊಂದಿಗೆ ಕಾಂಗ್ರೆಸ್ ಯುವ ಶಾಸಕನ ಅನುಚಿತ ವರ್ತನೆ: ಗಾಡ್ ಫಾದರ್ ಗಳಿಗೆ ಮುಜುಗರ!

Photo Credit: Rahul Mamkootathil/ Instagram
ತಿರುವನಂತಪುರಂ: ಕೇರಳದ ಯುವ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟತ್ತಿಲ್ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿಯಾಗಿರುವ ಬೆನ್ನಿಗೇ, ಅವರ ಈ ನಡವಳಿಕೆಗೆ ಅವರ ಗಾಡ್ ಫಾದರ್ ಗಳೆಂದೇ ಹೇಳಲಾಗುತ್ತಿರುವ ರಾಜ್ಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ಹಾಗೂ ಸಂಸದ ಶಫಿ ಪರಾಂಬಿಲ್ ಕಾರಣ ಎಂಬ ಆರೋಪಗಳೂ ಕೇಳಿ ಬರತೊಡಗಿವೆ.
ರಾಹುಲ್ ಮಂಕೂಟತ್ತಿಲ್ ರನ್ನು ರಕ್ಷಿಸಲಾಗುತ್ತಿದೆ ಎಂದು ಈಗಾಗಲೇ ವಿ.ಡಿ.ಸತೀಶನ್ ಹಾಗೂ ಶಫಿ ವಿರುದ್ಧ ಆಡಳಿತಾರೂಢ ಸಿಪಿಎಂ ಹಾಗೂ ಮತ್ತೊಂದು ವಿರೋಧ ಪಕ್ಷವಾದ ಬಿಜೆಪಿ ದಾಳಿ ನಡೆಸುತ್ತಿವೆ. ಇದೇ ಹೊತ್ತಿನಲ್ಲಿ ರಾಜ್ಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಪಕ್ಷದೊಳಗೆ ಕೆಲವು ಅತೃಪ್ತ ಹಿರಿಯ ನಾಯಕರ ಆಶೀರ್ವಾದವಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಪಾಲಕ್ಕಾಡ್ ಶಾಸಕರಾಗಿದ್ದ ಶಫಿ ಪರಾಂಬಿಲ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನಂತರ, ರಾಹುಲ್ ಮಂಕೂಟತ್ತಿಲ್ ರನ್ನು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವಲ್ಲಿ ಅವರು ಹಾಗೂ ರಾಜ್ಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ, ಈ ಆಯ್ಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಡಿಜಿಟಲ್ ಮಾಧ್ಯಮ ಸಂಚಾಲಕ ಪಿ.ಸರಿನ್, ವಿ.ಡಿ.ಸತೀಶನ್, ಶಫಿ ಹಾಗೂ ರಾಹುಲ್ ನೇತೃತ್ವದ ಗುಂಪು, ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸುತ್ತಿದೆ ಎಂದು ನೇರವಾಗಿಯೇ ಆರೋಪಿಸಿದ್ದರು.
ಆಗ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಸರಿನ್, ನಂತರ, ಸಿಪಿಎಂ ಸೇರ್ಪಡೆಯಾಗಿ, ರಾಹುಲ್ ಮಂಕೂಟತ್ತಿಲ್ ವಿರುದ್ಧ ಪಾಲಕ್ಕಾಡ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ರಾಹುಲ್ ವಿರುದ್ಧ ಹೀನಾಯವಾಗಿ ಪರಾಭವಗೊಂಡಿದ್ದರು. ಇದರಿಂದ ಸತೀಶನ್ ಪಾಳೆಯ ಮತ್ತಷ್ಟು ಪ್ರಬಲಗೊಂಡಿತ್ತು. ಇದರಿಂದಾಗಿ ಪಕ್ಷದೊಳಗಿನ ಮತ್ತೊಂದು ಹಿರಿಯ ನಾಯಕರ ಗುಂಪು ಅಸಮಾಧಾನಕ್ಕೀಡಾಗಿತ್ತು ಎನ್ನಲಾಗಿದೆ.
ಆದರೀಗ, ರಾಹುಲ್ ಮಂಕೂಟತ್ತಿಲ್ ದುರ್ವರ್ತನೆಯ ಕುರಿತು ರಾಜ್ಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರಿಗೆ ನಟಿ ರಿನಿ ಆ್ಯನ್ ಜಾರ್ಜ್ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ, ಅವರು ಅದನ್ನು ನಿರ್ಲಕ್ಷಿಸಿ, ಅವರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆದರೆ, ಈ ವಿಷಯ ನನ್ನ ಗಮನಕ್ಕೆ ಗಮನಕ್ಕೆ ಬಂದ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ವಿ.ಡಿ.ಸತೀಶನ್ ಸ್ಪಷ್ಟನೆ ನೀಡಿದ್ದಾರೆ.
ಸೌಜನ್ಯ: deccanherald.com







