ಚಂಡೀಗಢಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಿಸಲು ಕೇಂದ್ರದಿಂದ ಮಸೂದೆ: ಪಂಜಾಬ್ ವಿರೋಧ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Photo: PTI)
ಚಂಡೀಗಢ: ಸದ್ಯ ಪಂಜಾಬ್ ರಾಜ್ಯಪಾಲರೇ ಆಡಳಿತ ನಡೆಸುತ್ತಿರುವ ಕೇಂದ್ರಾಡಳಿತ ಪ್ರದೇಶ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯಡಿ ಸೇರ್ಪಡೆ ಮಾಡಿ, ಅಲ್ಲಿಗೆ ರಾಷ್ಟ್ರಪತಿಯಿಂದ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ಅನ್ನು ನೇಮಿಸುವ ಮಸೂದೆಯನ್ನು ಮಂಡಿಸುವ ಪ್ರಸ್ತಾವವನ್ನು ಎನ್ಡಿಎ ನೇತೃತ್ವದ ಕೇಂದ್ರ ಸರಕಾರ ಮುಂದಿಟ್ಟಿದೆ.
ಈ ಪ್ರಸ್ತಾವಿತ ಮಸೂದೆಯ ವಿರುದ್ಧ ಪಂಜಾಬ್ ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದ್ದು, ತನ್ನ ಸ್ವಂತ ರಾಜಧಾನಿ ಮೇಲಿನ ಪಂಜಾಬ್ ಹಕ್ಕನ್ನು ಈ ಮಸೂದೆ ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ.
ರಾಜ್ಯಸಭಾ ಅಂತರ್ಜಾಲ ತಾಣದ ವಾರ್ತಾಪತ್ರದ ಪ್ರಕಾರ, ಸಂವಿಧಾನದ 131ನೇ ತಿದ್ದುಪಡಿ ಮಸೂದೆ, 2025 ಅನ್ನು ಡಿಸೆಂಬರ್ 1, 2025ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, “ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರ ಮಂಡಿಸಲು ಮುಂದಾಗಿರುವ ಪ್ರಸ್ತಾವಿತ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ತಿದ್ದುಪಡಿ ಪಂಜಾಬ್ ನ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನಮ್ಮ ರಾಜ್ಯದ ಹಳ್ಳಿಗಳನ್ನು ಬೇರುಸಹಿತ ಕಿತ್ತುಹಾಕುವ ಮೂಲಕ ಸ್ಥಾಪಿಸಲಾದ ಕೇಂದ್ರಾಡಳಿತ ಪ್ರದೇಶವು ಪಂಜಾಬ್ ಗೆ ಮಾತ್ರ ಸೇರಿದೆ. ನಮ್ಮ ಹಕ್ಕನ್ನು ನಾವು ಹಾಗೆ ಕಳೆದುಕೊಳ್ಳಲು ಬಿಡುವುದಿಲ್ಲ. ಅದಕ್ಕಾಗಿ ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಘೋಷಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಸಭಾ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಕೂಡಾ ಈ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿದ್ದು, ಇದರ ವಿರುದ್ಧ ಎಲ್ಲ ಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. “ಈ ಮಸೂದೆಯು ಪಂಜಾಬ್ ನ ಸ್ವಂತ ರಾಜಧಾನಿಯ ಮೇಲಿನ ಐತಿಹಾಸಿಕ ಸಾಂವಿಧಾನಿಕ ಮತ್ತು ಭಾವನಾತ್ಮಕ ಹಕ್ಕನ್ನು ದುರ್ಬಲಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ” ಎಂದು ಅವರು ಆರೋಪಿಸಿದ್ದಾರೆ.







