ಕಳವಳಕಾರಿ ಹಂತಕ್ಕೆ ತಲುಪಿದ ದಿಲ್ಲಿ ವಾಯು ಮಾಲಿನ್ಯ: ಅಕುಮ್ಸ್ ಫಾರ್ಮಾ ಹಣಕಾಸು ಮುಖ್ಯಸ್ಥರಿಂದ ರಾಜೀನಾಮೆ

Photo Credit : PTI
ಹೊಸದಿಲ್ಲಿ: ದಿಲ್ಲಿಯಲ್ಲಿನ ವಾಯು ಮಾಲಿನ್ಯ ಕಳವಳಕಾರಿ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ನನ್ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಅಕುಮ್ಸ್ ಡ್ರಗ್ಸ್ ಆ್ಯಂ ಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ನ ಹಣಕಾಸು ವಿಭಾಗದ ಮುಖ್ಯಸ್ಥ ರಾಜ್ ಕುಮಾರ್ ಬಾಫ್ನಾ ಹೇಳಿದ್ದಾರೆ.
ವೈಯಕ್ತಿಕ ಕಾರಣಗಳಿಗಾಗಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಸಿಬ್ಬಂದಿ ಹುದ್ದೆಗೆ ಡಿಸೆಂಬರ್ 31, 2025ರಿಂದ ಅನ್ವಯವಾಗುವಂತೆ ರಾಜ್ ಕುಮಾರ್ ಬಾಫ್ನಾ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತನ್ನ ಶಾಸನಾತ್ಮಕ ಫೈಲಿಂಗ್ ನಲ್ಲಿ ಅಕುಮ್ಸ್ ಡ್ರಗ್ಸ್ ಆ್ಯಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ತಿಳಿಸಿದೆ. ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದ್ದು, ಅದೇ ದಿನ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದೂ ಸಂಸ್ಥೆ ಹೇಳಿದೆ.
ಇದಕ್ಕೂ ಮುನ್ನ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸುಮೀತ್ ಸೂದ್ ಅವರನ್ನುದ್ದೇಶಿಸಿ ಬರೆದಿರುವ ಪತ್ರದಲ್ಲಿ, “ದಿಲ್ಲಿಯಲ್ಲಿ ವಾಯು ಮಾಲಿನ್ಯದ ಮಟ್ಟದ ಕಾರಣಕ್ಕೆ ನನ್ನನ್ನು ಆದಷ್ಟು ಶೀಘ್ರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಈ ಪ್ರಕ್ರಿಯೆಯಲ್ಲಿ ನನಗೇನಾದರೂ ನೆರವು ದೊರೆಯಬಹುದೇ ಎಂಬುದನ್ನು ದಯವಿಟ್ಟು ತಿಳಿಸಿ” ಎಂದು ರಾಜ್ ಕುಮಾರ್ ಬಾಫ್ನಾ ಮನವಿ ಮಾಡಿದ್ದಾರೆ.
ಈ ಪತ್ರಕ್ಕೆ ಪ್ರತಿಯಾಗಿ ರಾಜ್ ಕುಮಾರ್ ಬಾಫ್ನಾರ ರಾಜೀನಾಮೆ ಪತ್ರವನ್ನು ಅನುಮೋದಿಸಿರುವ ಸುಮೀತ್ ಸೂದ್, “ಸಂಸ್ಥೆಯು ಡಿಸೆಂಬರ್ 31, 2025ರಂದು ರಾಜ್ ಕುಮಾರ್ ಬಾಫ್ನಾರನ್ನು ಔಪಚಾರಿಕವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಲಿದೆ. ನಮಗೆ ನಿಮ್ಮ ನಿರ್ಧಾರದ ಬಗ್ಗೆ ವಿಷಾದವಿದ್ದರೂ, ನಿಮ್ಮ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನಾವು ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಈ ನಡುವೆ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ವಾಯು ಗುಣಮಟ್ಟ ಮತ್ತಷ್ಟು ವಿಷಮಿಸಿದ್ದು, ಅತಿಯಾದ ಚಳಿ ಹಾಗೂ ಉಸಿರುಗಟ್ಟಿಸುವ ವಾತಾವರಣದಿಂದ ದಿಲ್ಲಿ ನಿವಾಸಿಗಳು ತೀವ್ರ ಸಮಸ್ಯೆಗೊಳಗಾಗಿದ್ದಾರೆ.







