Tamil Nadu | ಪೊಂಗಲ್ ಹಬ್ಬಕ್ಕೆ ಪ್ರತಿ ಪಡಿತರ ಚೀಟಿದಾರರಿಗೆ 3 ಸಾವಿರ ರೂ.ನೆರವು ಘೋಷಿಸಿದ ಸರಕಾರ

ಎಂ.ಕೆ. ಸ್ಟಾಲಿನ್ | Photo Credit : PTI
ಚೆನ್ನೈ, ಜ. 4: ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಹಾಗೂ ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಸುಮಾರು 19,000 ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರವಿವಾರ ಘೋಷಿಸಿದ್ದಾರೆ.
ರಾಜ್ಯ ಸರಕಾರ ಅಕ್ಕಿ, ಸಕ್ಕರೆ, ಕಬ್ಬು ಹಾಗೂ ಧೋತಿ, ಸೀರೆಯನ್ನು ಒಳಗೊಂಡ ಪೊಂಗಲ್ ಉಡುಗೊರೆ ʼಹ್ಯಾಂಪರ್ʼ ಜೊತೆಗೆ 3,000 ರೂ. ನಗದು ಉಡುಗೊರೆಯನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ರಾಜ್ಯ ಸರಕಾರ ಪೊಂಗಲ್ ಉಡುಗೊರೆ ಯೋಜನೆ ಜಾರಿಗಾಗಿ 6,936.18 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ನಗದು ಉಡುಗೊರೆಯನ್ನು ಪಡಿತರ ಅಂಗಡಿ ನೌಕರರ ಮೂಲಕ ವಿತರಿಸಲಾಗುವುದು ಎಂದು ಸರಕಾರ ಹೇಳಿದೆ.
ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಡಿಎಂಕೆ ಸರಕಾರ ಪೊಂಗಲ್ ಉಡುಗೊರೆಯ ಜೊತೆಗೆ ನಗದು ರೂಪದ ನೆರವು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.





