ಪೂಜಾ ಖೇಡ್ಕರ್ ಪ್ರಕರಣ | ನಾಗರಿಕ ಸೇವೆಗಳಲ್ಲಿ ಅಂಗವೈಕಲ್ಯ ಮೀಸಲಾತಿಯ ಕುರಿತು IAS ಅಧಿಕಾರಿಯಿಂದ ವಿವಾದಾತ್ಮಕ ಪೋಸ್ಟ್

ಸ್ಮಿತಾ ಸಭರ್ವಾಲ್ | ಪೂಜಾ ಖೇಡ್ಕರ್ PC: X.com
ಹೈದರಾಬಾದ್: ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಅಂಗವೈಕಲ್ಯದ ಕುರಿತ ವಿವಾದವು ತೀವ್ರ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲೇ, ಈ ವಿವಾದದ ರಂಗಸ್ಥಳ ಪ್ರವೇಶಿಸಿರುವ ತೆಲಂಗಾಣ ಐಎಎಸ್ ಅಧಿಕಾರಣಿ ಸ್ಮಿತಾ ಸಭರ್ವಾಲ್, ಅಖಿಲ ಭಾರತ ನಾಗರಿಕ ಸೇವೆಗಳಲ್ಲಿ ಅಂಗವೈಕಲ್ಯದ ಮೀಸಲಾತಿ ಅಗತ್ಯದ ಕುರಿತು ಪ್ರಶ್ನೆ ಎತ್ತಿ, ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ಮಿತಾ ಸಭರ್ವಾಲ್, "ಈ ವಿವಾದವು ತೀವ್ರ ಸ್ವರೂಪ ಪಡೆಯುತ್ತಿದ್ದು, ವಿಕಲಚೇತನರ ಬಗ್ಗೆ ಎಲ್ಲ ಬಗೆಯ ಗೌರವಗಳನ್ನಿಟ್ಟುಕೊಂಡೇ ಯಾವುದಾದರೂ ವಿಮಾನ ಯಾನ ಸಂಸ್ಥೆಯು ವಿಕಲಚೇತನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತೇವೆಯೆ? ಯಾರಾದರೂ ವಿಕಲಚೇತನ ಶಸ್ತ್ರಚಿಕಿತ್ಸಕರನ್ನು ನೀವು ನಂಬುತ್ತೀರೆ? ಅಖಿಲ ಭಾರತ ನಾಗರಿಕ ಸೇವೆಗಳ (ಐಎಎಸ್/ಐಪಿಎಸ್/ಐಎಫ್ಒಎಸ್) ಸ್ವರೂಪವು ಕ್ಷೇತ್ರ ಕಾರ್ಯವನ್ನು ಬಯಸುತ್ತದೆ, ದೀರ್ಘಾವಧಿಯ ಪ್ರಯಾಣವನ್ನು ಕೇಳುತ್ತದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಬೇಕಾಗುತ್ತದೆ. ಇದಕ್ಕೆಲ್ಲ ದೈಹಿಕ ಸಾಮರ್ಥ್ಯ ಅತ್ಯಗತ್ಯವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಅವರ ಪೋಸ್ಟ್ಗೆ ತೀಕ್ಷ್ಣ ಪ್ರತಿಕ್ರಿಯೆಗಳ ವ್ಯಕ್ತವಾಗಿವೆ. ನಾಗರಿಕ ಸೇವೆ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಮಾಜಿ ಅಧಿಕಾರಿ ಬಾಲ ಲತಾ ಮಲ್ಲವರಪು, ಸ್ಮಿತಾ ಸಭರ್ವಾಲ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ತಮ್ಮ ಪ್ರತಿಕ್ರಿಯೆಯಲ್ಲಿ ಶೇಕ್ಸ್ಪಿಯರ್ರನ್ನು ಉಲ್ಲೇಖಿಸಿರುವ ಬಾಲ ಲತಾ, "ಪ್ರಕೃತಿಯಲ್ಲಿ ಮನಸ್ಸನ್ನು ಬಿಟ್ಟರೆ ಬೇರೆಲ್ಲೂ ಕೊರತೆ ಇಲ್ಲ. ಯಾರನ್ನೂ ಕೂಡಾ ನಿರ್ದಯಿ ಎಂದಲ್ಲದೆ ವಿರೂಪಿಗಳು ಎಂದು ಕರೆಯಲು ಸಾಧ್ಯವಿಲ್ಲ" ಎಂದು ಕುಟುಕಿದ್ದಾರೆ.
ಉನ್ನತ ಹುದ್ದೆಯಲ್ಲಿದ್ದುಕೊಂಡೂ ಸ್ಮಿತಾ ಸಭರ್ವಾಲ್ ಅಂತಹ ಹೇಳಿಕೆ ನೀಡಲು ಹೇಗೆ ಸಾಧ್ಯ ಎಂತಲೂ ಬಾಲ ಲತಾ ಮಲ್ಲವರಪು ಪ್ರಶ್ನಿಸಿದ್ದಾರೆ.
ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡಾ ಸ್ಮಿತಾ ಸಭರ್ವಾಲ್ರ ಪೋಸ್ಟ್ ಅನ್ನು ಖಂಡಿಸಿದ್ದು, "ಇದೊಂದು ರೋಗಿಷ್ಠ ಹಾಗೂ ಹೊರಗಿಡುವ ದೃಷ್ಟಿಕೋನವಾಗಿದೆ" ಎಂದು ಟೀಕಿಸಿದ್ದಾರೆ.







