ಪೋರ್ಷೆ ಕಾರು ಅಪಘಾತ ಪ್ರಕರಣ | ಅಪ್ರಾಪ್ತ ಬಾಲಕನ ತಂದೆಗೆ ತಾತ್ಕಾಲಿಕ ಜಾಮೀನು ನಿರಾಕರಿಸಿದ ಪುಣೆ ನ್ಯಾಯಾಲಯ

Photo Credit: PTI
ಪುಣೆ: ತಮ್ಮ 79 ವರ್ಷದ ತಾಯಿಯ ಆರೋಗ್ಯ ಸ್ಥಿತಿಯನ್ನು ಮುಂದು ಮಾಡಿ, ತಾತ್ಕಾಲಿಕ ಜಾಮೀನಿಗೆ ಮನವಿ ಮಾಡಿದ್ದ ಮೇ 2024ರಂದು ನಡೆದಿದ್ದ ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಚಾಲಕನ ತಂದೆಗೆ ಜಾಮೀನು ಮಂಜೂರು ಮಾಡಲು ಬುಧವಾರ ಪುಣೆಯ ನ್ಯಾಯಾಲಯವೊಂದು ನಿರಾಕರಿಸಿದೆ.
ಅಪರಾಧದ ಸ್ವರೂಪವನ್ನು ಗಂಭೀರವಾಗಿ ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೆ.ಪಿ. ಕ್ಷೀರ್ ಸಾಗರ್, “ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ ಎಂಬ ಶಂಕೆಗೆ ಸಕಾರಣವಿರುವುದರಿಂದ, ಅಪ್ರಾಪ್ತ ಬಾಲಕನ ತಂದೆಯನ್ನು ಈ ಹಂತದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಆಗುವುದಿಲ್ಲ” ಎಂದು ಅಭಿಪ್ರಾಯ ಪಟ್ಟರು.
ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಅಪ್ರಾಪ್ತ ಬಾಲಕನ ತಂದೆ, ನನ್ನ ತಾಯಿ ಗಂಭೀರ ವೈದ್ಯಕೀಯ ಪರಿಸ್ಥಿತಿಯಲ್ಲಿದ್ದು, ಅವರು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಹೀಗಾಗಿ, ಶಸ್ತ್ರಚಿಕಿತ್ಸೆಗೂ ಮುನ್ನ ಹಾಗೂ ನಂತರ, ನನ್ನ ಉಪಸ್ಥಿತಿ ಅನಿವಾರ್ಯವಾಗಿದೆ ಎಂದು ತಮ್ಮ ಜಾಮೀನು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಆದರೆ, ಈ ಮನವಿಯನ್ನು ವಿರೋಧಿಸಿದ ಪ್ರಾಸಿಕ್ಯೂಷನ್, ಅರ್ಜಿದಾರರ ತಾಯಿಯ ಆರೋಗ್ಯ ಸಮಸ್ಯೆ ಅವರ ವೃದ್ಧಾಪ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಅವರಿಗೆ ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ವಾದಿಸಿತು.
ಮೇ 19, 2024ರ ನಸುಕಿನಲ್ಲಿ ಪೋರ್ಷೆ ಕಾರನ್ನು ಪಾನಮತ್ತ ಸ್ಥಿತಿಯಲ್ಲಿ ಚಲಾಯಿಸುತ್ತಿದ್ದ ಆರೋಪಿಯ 17 ವರ್ಷದ ಪುತ್ರನು, ಕಲ್ಯಾಣ್ ನಗರ್ ಪ್ರದೇಶದಲ್ಲಿ ಮಹಿಳೆ ಹಾಗೂ ಪುರುಷ ಸವಾರಿ ಮಾಡುತ್ತಿದ್ದ ಮೋಟರ್ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದ್ದನು. ನಂತರ, ಸಾಫ್ಟ್ ವೇರ್ ವೃತ್ತಿಪರರಾಗಿದ್ದ ಅವರಿಬ್ಬರೂ ಈ ಅಪಘಾತದಲ್ಲಿ ಮೃತಪಟ್ಟಿದ್ದರು.







