ಆಹಾರ ದಾಸ್ತಾನಿನ ಮೇಲೆ ಗಂಭೀರ ಪರಿಣಾಮ ಸಾಧ್ಯತೆ; ತಜ್ಞರ ಪ್ರತಿಪಾದನೆ
ದೇಶದ ಶೇ. 50 ಭಾಗದಲ್ಲಿ ಬರದಂತಹ ಪರಿಸ್ಥಿತಿ

ಸಾಂದರ್ಭಿಕ ಚಿತ್ರ: Photo: PTI
ಹೊಸದಿಲ್ಲಿ: ದೇಶದ ಒಟ್ಟು 718 ಜಿಲ್ಲೆಗಳಲ್ಲಿ ಸರಿಸುಮಾರು 410 ಜಿಲ್ಲೆಗಳು ನೈಋತ್ಯ ಮುಂಗಾರು ಋತುವಿನ ಅಂತ್ಯದಲ್ಲಿ ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ 410 ಜಿಲ್ಲೆಗಳು ದೇಶದ ಶೇ. 50 ಭಾಗವನ್ನು ಒಳಗೊಂಡಿವೆ. ಕಳೆದ ವರ್ಷದ ಪ್ರತಿಕೂಲ ಹವಾಮಾನದ ಒತ್ತಡದಲ್ಲಿರುವ ಭಾರತದ ಆಹಾರ ದಾಸ್ತಾನಿನ ಮೇಲೆ ಇದು ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.
ಇದಲ್ಲದೆ, ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಬಿದ್ದಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ)ಯ ಬರ ನಿಗಾ ವ್ಯವಸ್ಥೆ ಸ್ಟಾಂಡರ್ಡ್ ಪರ್ಸೆಪ್ಶನ್ ಇಂಡೆಕ್ಸ್ (ಎಸ್ಪಿಐ) ಪ್ರಕಾರ ಜೂನ್ 1 ಹಾಗೂ ಸೆಪ್ಟಂಬರ್ 27ರ ನಡುವೆ ನಾಲ್ಕು ತಿಂಗಳ ನೈಋತ್ಯ ಮುಂಗಾರು ಋತುವಿನ ಅಂತ್ಯದಲ್ಲಿ ದೇಶದ ಅರ್ಧಕ್ಕಿಂತ ಹೆಚ್ಚು ಭಾಗ ಬರದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪೂರ್ವ, ಈಶಾನ್ಯ ವಲಯ, ದಕ್ಷಿಣ ಪರ್ಯಾಯ ದ್ವೀಪ, ಈಶಾನ್ಯ ವಲಯ ಹಾಗೂ ವಾಯುವ್ಯ ವಲಯದ ಕೆಲವು ಭಾಗಗಳು ಗಂಭೀರ ಬರವನ್ನು ಎದುರಿಸುತ್ತಿವೆ.
ಈ ಪ್ರದೇಶಗಳ ಪರಿಸ್ಥಿತಿ ‘ಅತ್ಯಂತ ಶುಷ್ಕ ಪರಿಸ್ಥಿತಿ’ಯಿಂದ ‘ಸೌಮ್ಯ ಶುಷ್ಕ’ಗೆ ಬದಲಾಗುತ್ತಿದೆ ಎಂಬುದನ್ನು ಎಸ್ಪಿಐಯ ವಿಶ್ಲೇಷಣೆ ತೋರಿಸಿದೆ. ಒಟ್ಟು 718 ಜಿಲ್ಲೆಗಳಲ್ಲಿ ಸುಮಾರು ಶೇ. 41 ‘ಸೌಮ್ಯ ಶುಷ್ಕ’ ವರ್ಗದ ಅಡಿಯಲ್ಲಿ, ಶೇ. 9 ಜಿಲ್ಲೆಗಳು ‘ಮಧ್ಯಮ ಶುಷ್ಕ’ ವರ್ಗದ ಅಡಿಯಲ್ಲಿ, ಹಾಗೂ ಶೇ. 8 ಜಿಲ್ಲೆಗಳು ‘ತೀವ್ರ ಶುಷ್ಕ’ ವರ್ಗದ ಅಡಿಯಲ್ಲಿ ಬರುತ್ತದೆ. ‘ಸೌಮ್ಯ ಶುಷ್ಕ’ ಪರಿಸ್ಥಿತಿಯನ್ನು ಬರದಂತಹ ಸ್ಥಿತಿ ಎಂದು ವ್ಯಾಖ್ಯಾನಿಸುತ್ತಾರೆ.
ಇದು ಮಣ್ಣಿನ ತೇವಾಂಶವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಹಾಗೂ ರಾಬಿ ಬೆಳೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಭೂಮಿ ಹಾಗೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ನಾಯರ್ ರಾಜೀವನ್ ತಿಳಿಸಿದ್ದಾರೆ. ತೀವ್ರ ಬರದಂತಹ ಪರಿಸ್ಥಿತಿಯ ಎಸ್ಪಿಐಯ ವ್ಯಾಖ್ಯಾನವನ್ನು ಅರ್ಥೈಸಿಕೊಳ್ಳುವುದು ಸ್ಪಲ್ಪ ಕಷ್ಟಕರ. ಆದರೂ ‘‘ಇದು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಂತಹ ದೇಶದ ಶುಷ್ಕ ಪ್ರದೇಶದಲ್ಲಿ ತೀವ್ರ ಪರಿಣಾಮ ಉಂಟು ಮಾಡಬಹುದು. ಆದರೆ, ಪೂರ್ವ ಭಾರತದಲ್ಲಿ ಇದರ ಪರಿಣಾಮ ಕಡಿಮೆ ಇರಲಿದೆ’’ ಎಂದು ರಾಜೀವನ್ ಹೇಳಿದ್ದಾರೆ.







