ದೇವಸ್ಥಾನಗಳ ಹೊರಗೆ ಪ್ರಸಾದ ಮಾರುವ ಹಿಂದುಯೇತರರನ್ನು ಥಳಿಸಿ: ವಿವಾದಾತ್ಮಕ ಹೇಳಿಕೆ ನೀಡಿದ ಪ್ರಜ್ಞಾ ಠಾಕೂರ್

ಪ್ರಜ್ಞಾ ಠಾಕೂರ್ |PHOTO: PTI
ಭೋಪಾಲ(ಮ.ಪ್ರ),ಸೆ.29: ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಆಘಾತಕಾರಿ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ರವಿವಾರ ಇಲ್ಲಿ ವಿಶ್ವ ಹಿಂದು ಪರಿಷತ್ನ ದುರ್ಗಾ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಗಳ ಹೊರಗೆ ಪ್ರಸಾದ ಮಾರುತ್ತಿರುವ ಹಿಂದುಯೇತರರು ಕಂಡು ಬಂದರೆ ಅವರನ್ನು ಥಳಿಸುವಂತೆ ಹಿಂದು ಭಕ್ತರನ್ನು ಆಗ್ರಹಿಸಿದರು.
ದೇವಸ್ಥಾನಗಳ ಸುತ್ತಮುತ್ತ ಯಾರು ಪ್ರಸಾದ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಲು ಗುಂಪುಗಳನ್ನು ರೂಪಿಸುವಂತೆ ಮತ್ತು ಮಾರಾಟಗಾರರು ಹಿಂದುಗಳಲ್ಲದಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು ಸರಿಯಾಗಿ ಥಳಿಸುವಂತೆ ಹಿಂದುಗಳನ್ನು ಒತ್ತಾಯಿಸಿದರು.
ಭಕ್ತರು ಹಿಂದುಯೇತರ ಮಾರಾಟಗಾರರಿಂದ ಪ್ರಸಾದ ಖರೀದಿಸಲು ನಿರಾಕರಿಸಬೇಕು. ಅವರು ಪ್ರಸಾದ ಮಾರಲು ಅಥವಾ ದೇವಸ್ಥಾನವನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದರು.
ಹಿಂದುಗಳು ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಮನೆಗಳಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂಬ ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ ಠಾಕೂರ್,‘ನಮ್ಮ ಪುತ್ರಿಯರು ಮತ್ತು ಸೋದರಿಯರನ್ನು ಮನೆಗಳಿಂದ ಕರೆದುಕೊಂಡು ಹೋಗಿ ಅವರನ್ನು ತುಂಡುಗಳಾಗಿ ಕತ್ತರಿಸಿ ರಸ್ತೆಯಲ್ಲಿ ಎಸೆದಾಗ ನಮಗೆ ತೀವ್ರ ನೋವುಂಟಾಗುತ್ತದೆ. ಈ ನೋವನ್ನು ನಿವಾರಿಸಲು ಶತ್ರು ನಿಮ್ಮ ಮನೆಯ ಹೊಸ್ತಿಲು ದಾಟಲು ಪ್ರಯತ್ನಿಸಿದರೆ ಅವರನ್ನು ತುಂಡರಿಸಿ. ಪ್ರತಿ ಮನೆಯಲ್ಲಿಯೂ ದುರ್ಗೆಯನ್ನು ಸಿದ್ಧಪಡಿಸಲು ದುರ್ಗಾ ವಾಹಿನಿಯು ಶ್ರಮಿಸುತ್ತಿದೆ. ನಾವು ಪ್ರತಿಯೊಂದೂ ಮನೆಯಲ್ಲಿಯೂ ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸುತ್ತೇವೆ,ಏಕೆಂದರೆ ಈ ದೇಶ ನಮ್ಮದು’ ಎಂದು ಹೇಳಿದರು.







