ಬಾಲಿವುಡ್ ಜನರು ಸರಕಾರದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ: ನಟ ಪ್ರಕಾಶ್ ರಾಜ್

Prakash Raj (Photo credit: wikipedia)
ಬೆಂಗಳೂರು: ರಾಜಕೀಯ ವಿಷಯಗಳ ಬಗ್ಗೆ ಮಾತನಾಡಲು ನನ್ನ ಬಾಲಿವುಡ್ ಸಹೋದ್ಯೋಗಿಗಳು ಹೆದರುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಇತ್ತೀಚೆಗೆ ಹೇಳಿದ್ದಾರೆ.
‘ದ ಲಲನ್ಟಾಪ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವರು ಸರಕಾರದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ಹೇಳಿದ ಅವರು, ‘‘ಅವರ ಪೈಕಿ ಅರ್ಧದಷ್ಟು ಮಂದಿ ಮಾರಾಟವಾಗಿದ್ದಾರೆ’’ ಹಾಗೂ ಅವರು ಸರಕಾರವನ್ನು ಟೀಕಿಸಲು ಹೋಗುವುದಿಲ್ಲ ಎಂದರು.
ಮಹತ್ವದ ಚಿತ್ರಗಳ ನಿರ್ಮಾಣವನ್ನು ನಿಲ್ಲಿಸಲು ಸರಕಾರ ಪ್ರಯತ್ನಿಸಿದರೂ, ನಿರ್ದೇಶಕರು ಅಂಥ ಚಿತ್ರಗಳ ನಿರ್ಮಾಣವನ್ನು ಮುಂದುವರಿಸಬೇಕು ಎಂದು ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು. ಸರಕಾರಗಳು ಚರ್ಚೆಯನ್ನು ಹತ್ತಿಕ್ಕಲು ಪ್ರಯತ್ನಿಸಬಹುದು ಎಂದು ಹೇಳಿದ ಅವರು, ತಾವು ಮಾಡುತ್ತಿರುವ ಚಿತ್ರಗಳ ಬಗ್ಗೆ ಕಲಾವಿದರಿಗೆ ಅರಿವು ಇರಬೇಕು ಮತ್ತು ಚಿತ್ರಗಳ ಬಿಡುಗಡೆಗಾಗಿ ಹೋರಾಡಲು ಅವರು ಸಿದ್ಧರಿರಬೇಕು ಎಂದರು.
‘‘ಯಾವುದೇ ಬಲಿಷ್ಠ ಸರಕಾರವು ಚರ್ಚೆಯನ್ನು ಹತ್ತಿಕ್ಕಲು ಬಯಸುತ್ತದೆ. ಎರಡನೆಯದಾಗಿ, ತಾವು ಮಾಡುತ್ತಿರುವ ಚಿತ್ರಗಳ ಬಗ್ಗೆ ಕಲಾವಿದರಿಗೆ ಜಾಗೃತಿ ಇರಬೇಕು. ಚಿತ್ರದ ಬಿಡುಗಡೆಗಾಗಿ ಹೋರಾಡಲು ಅವರು ಸಿದ್ಧರಾಗಿರಬೇಕು. ಪ್ರತಿರೋಧ ಅಗತ್ಯವಾಗಿದೆ’’ ಎಂದು ಅವರು ನುಡಿದರು.





