ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುವುದಿಲ್ಲ : ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ (Photo: PTI)
ಹೊಸದಿಲ್ಲಿ : 55ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರನ್ನು ಸೋಮವಾರ ಸಂಜೆ ಘೋಷಿಸಲಾಯಿತು. ʼಮಂಜುಮ್ಮೆಲ್ ಬಾಯ್ಸ್ʼ ಮತ್ತು ʼಬ್ರಮಯುಗಂ’ ಚಿತ್ರಗಳು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ನಟ ಪ್ರಕಾಶ್ ರಾಜ್ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ವಿಜೇತರ ಆಯ್ಕೆಗಾಗಿದ್ದ ತೀರ್ಪುಗಾರರ ಸಮಿತಿಯ ನೇತೃತ್ವ ವಹಿಸಿದ್ದರು. ಈ ಕುರಿತ ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್ ರಾಜ್ ಕೂಡ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ಅನುಭವ ಮತ್ತು ಮಮ್ಮುಟ್ಟಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಗುವ ಸಾಧ್ಯತೆಗಳ ಬಗ್ಗೆ ಪ್ರಕಾಶ್ ರಾಜ್ ಅವರಿಗೆ ಕೇಳಲಾಯಿತು. ಈ ವೇಳೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಮಮ್ಮುಟ್ಟಿಯನ್ನು ಕಡೆಗಣಿಸಿದ್ದಕ್ಕಾಗಿ ಪ್ರಕಾಶ್ ರಾಜ್ ಕಟುವಾಗಿ ಟೀಕಿಸಿದ್ದಾರೆ.
"ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ರಾಜಿ ಮಾಡಿಕೊಂಡಿದೆ ಎಂದು ಹೇಳುವುದರಲ್ಲಿ ನನಗೆ ಅಭ್ಯಂತರವಿಲ್ಲ. ಕೇರಳ ರಾಜ್ಯ ಚಲನ ಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ತೀರ್ಪುಗಾರನಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅವರು ನನಗೆ ಕರೆ ಮಾಡಿ ನಮಗೆ ಅನುಭವ ಇರುವ ಹೊರಗಿನವರು ಬೇಕು, ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ನೀವು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದರು. ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಇದು ನಡೆಯುವುದಿಲ್ಲ."ದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿಯಂತಹ ಚಲನಚಿತ್ರಗಳ ಮೇಲೆ ಪರೋಕ್ಷ ದಾಳಿಯನ್ನು ಮಾಡುತ್ತಾ, "ಫೈಲ್ಗಳು ಮತ್ತು ಪಿಲ್ಸ್ಗಳು ಪ್ರಶಸ್ತಿಗಳನ್ನು ಪಡೆಯುತ್ತಿರುವಾಗ, ಅದು ಏನೆಂದು ನಮಗೆ ತಿಳಿದಿದೆ. ಅಂತಹ ಸರಕಾರ ಮತ್ತು ಸಮಿತಿಗಳು ಮಮ್ಮುಟ್ಟಿಯಂತಹ ಕಲಾವಿದರಿಗೆ ತಕ್ಕ ನ್ಯಾಯ ಕೊಡುವುದಿಲ್ಲ" ಎಂದು ಪ್ರಕಾಶ್ ರಾಜ್ ಹೇಳಿದರು.







