ಬಿಜೆಪಿಯ ಒತ್ತಡದಿಂದ ಜನ ಸುರಾಜ್ ಪಕ್ಷದ ಮೂವರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ: ಪ್ರಶಾಂತ್ ಕಿಶೋರ್ ಆರೋಪ

ಪ್ರಶಾಂತ್ ಕಿಶೋರ್ (Photo: PTI)
ಪಾಟ್ನಾ: ಬಿಜೆಪಿಯ ಒತ್ತಡದಿಂದ ಪಕ್ಷದ ಮೂವರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ ಎಂದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಆಡಳಿತಾರೂಢ ಎನ್ಡಿಎ ಚುನಾವಣೆಯಲ್ಲಿ ಸೋಲಿನ ಭಯದಿಂದ ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಚುನಾವಣಾ ಆಯೋಗ ಅಭ್ಯರ್ಥಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ದಾನಾಪುರ, ಬ್ರಹ್ಮಪುರ ಮತ್ತು ಗೋಪಾಲ್ಗಂಜ್ ಕ್ಷೇತ್ರಗಳಲ್ಲಿನ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಹೇಳಿದರು.
ಬಿಜೆಪಿ ಸೂರತ್ ಮಾದರಿಯನ್ನು ಅನುಸರಿಸಲು ಪ್ರಯತ್ನಿಸಿದೆ. ಸೂರತ್ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇತರ ಎಲ್ಲಾ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಒತ್ತಾಯಿಸಲಾಗಿತ್ತು. ದೇಶಾದ್ಯಂತ ಮತದಾರರು ಇದಕ್ಕಾಗಿ ತಮ್ಮನ್ನು ಶಿಕ್ಷಿಸಿದ್ದಾರೆಂದು ಬಿಜೆಪಿಗೆ ತಿಳಿದಿಲ್ಲ.ಕಳೆದ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಬಿಜೆಪಿ ಹೇಳಿಕೊಂಡಿದ್ದರೂ ಅದು ಕೇವಲ 240 ಸ್ಥಾನಗಳನ್ನು ಮಾತ್ರ ಗೆದ್ದಿದೆ ಎಂದು ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆಗೆ ಪ್ರಶಾಂತ್ ಕಿಶೋರ್ ಅವರ ಪಕ್ಷವು ಬಿಹಾರದ ಎಲ್ಲಾ 243 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಮೂವರು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ.







