ಸಲಹಾ ಸೇವೆಗಳ ಮೂಲಕ ಮೂರು ವರ್ಷಗಳಲ್ಲಿ 241 ಕೋಟಿ ರೂ.ಗಳಿಸಿದ ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್ | Photo Credit: PTI
ಪಾಟ್ನಾ: ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ ಚೌಧರಿ ಮತ್ತು ಗ್ರಾಮೀಣ ಕಾಮಗಾರಿಗಳ ಸಚಿವ ಅಶೋಕ್ ಚೌಧರಿ ಅವರ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರು,ಸಾಮ್ರಾಟ ಚೌಧರಿ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಇಬ್ಬರು ಹಿರಿಯ ಎನ್ಡಿಎ ಸಚಿವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಕಿಶೋರ ತನ್ನ ಸ್ವಂತ ಆದಾಯದ ಬಗ್ಗೆಯೂ ಮಾತನಾಡಿದರು. ಪ್ರತಿ ರೂಪಾಯಿಗೂ ಲೆಕ್ಕವಿದೆ. ಕಳೆದ ಮೂರು ವರ್ಷಗಳಲ್ಲಿ ಸಲಹಾ ಸೇವೆಗಳ ಮೂಲಕ 241 ಕೋಟಿ ರೂ.ಗಳನ್ನು ಗಳಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ನಾಯಕರೂ ಆಗಿರುವ ಸಾಮ್ರಾಟ್ ಚೌಧರಿ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿದ ಕಿಶೋರ್,ಅವರು 1995ರ ತಾರಾಪುರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರು ಎಂಬ ತನ್ನ ಆರೋಪಗಳನ್ನು ಪುನರುಚ್ಚರಿಸಿದರು. ಈ ಘಟನೆಯಲ್ಲಿ ಕುಶ್ವಾಹ ಸಮುದಾಯದ ಏಳು ಜನರು ಕೊಲ್ಲಲ್ಪಟ್ಟಿದ್ದರು. ಘಟನೆಯ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕನಾಗಿದ್ದೆ ಎಂದು ಪ್ರತಿಪಾದಿಸಲು ಚೌಧರಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು ಎಂದೂ ಕಿಶೋರ್ ಆರೋಪಿಸಿದರು.
ತನ್ನ ಪಕ್ಷದ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ ಚೌಧರಿಯವರ ವಜಾಕ್ಕೆ ಆಗ್ರಹಿಸಲಿದೆ ಮತ್ತು ಈ ವಿಷಯದಲ್ಲಿ ತಾನು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರವನ್ನು ಬರೆಯುವುದಾಗಿ ಕಿಶೋರ ತಿಳಿಸಿದರು.
ಕಿಶೋರ ಸುದ್ದಿಗೋಷ್ಠಿಯಲ್ಲಿ ಜೆಡಿಯು ಸಚಿವ ಅಶೋಕ ಚೌಧರಿಯವರ ವಿರುದ್ಧ ಹೊಸ ಆರೋಪಗಳನ್ನೂ ಎತ್ತಿದರು. ಚೌಧರಿ ಭ್ರಷ್ಟಾಚಾರ ಮತ್ತು ಸರಕಾರಿ ಗುತ್ತಿಗೆಗಳನ್ನು ಒಳಗೊಂಡ ಕಮಿಷನ್ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು.
ಅಶೋಕ ಚೌಧರಿ 500 ಕೋಟಿ ರೂ.ಗಳ ಅಕ್ರಮ ಆಸ್ತಿಗಳನ್ನು ಹೊಂದಿದ್ದಾರೆ ಎನ್ನುವುದನ್ನು ತೋರಿಸುವ ದಾಖಲೆಗಳು ತನ್ನ ಬಳಿಯಿವೆ. ಅವರು ತನ್ನ ವಿರುದ್ಧದ 100 ಕೋಟಿ ರೂ.ಗಳ ಮಾನನಷ್ಟ ನೋಟಿಸನ್ನು ಏಳು ದಿನಗಳಲ್ಲಿ ಹಿಂದೆಗೆದುಕೊಳ್ಳದಿದ್ದರೆ ಆ ದಾಖಲೆಗಳನ್ನು ತಾನು ಬಿಡುಗಡೆಗೊಳಿಸುತ್ತೇನೆ ಎಂದರು.







