ಬಿಹಾರ ಚುನಾವಣೆ | ಸೋಲಿನ ಸಂಪೂರ್ಣ ಹೊಣೆ ಹೊತ್ತುಕೊಳ್ಳುತ್ತೇನೆ : ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್ (Photo credit: PTI)
ಪಾಟ್ನಾ : ಬಿಹಾರ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ ಖಾತೆ ತೆರೆಯಲು ವಿಫಲವಾದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಸೋಲಿನ ಸಂಪೂರ್ಣ ಹೊಣೆ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ಅವರ ಸರಕಾರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಪ್ರತಿ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ 10,000 ದಿಂದ 60,000 ರೂ.ಗಳವೆರೆಗೆ ನೀಡದಿದ್ದರೆ, ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ರಾಜ್ಯಾದ್ಯಂತ 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂ. ನೀಡುವುದಾಗಿ ಭರವಸೆ ನೀಡದಿದ್ದರೆ ಜೆಡಿಯು ಕೇವಲ 25 ಸ್ಥಾನಗಳಿಗೆ ತೃಪ್ತಿ ಪಡಬೇಕಿತ್ತು ಎಂದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಜನ ಸುರಾಜ್ ಪಕ್ಷವು ಚುನಾವಣೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ ಚುನಾವಣೆಯಲ್ಲಿ ಛಾಪು ಮೂಡಿಸುವಲ್ಲಿ ವಿಫಲವಾಯಿತು. ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.
ಮತಗಳ ಕಳ್ಳತನ ಇಡೀ ರಾಷ್ಟ್ರಮಟ್ಟದಲ್ಲಿ ನಡೆಯುತ್ತದೆ. ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ಗೆ ಹೋಗಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ನಮಗೆ ಚುನಾವಣೆಯಲ್ಲಿ ಹಿನ್ನಡೆಯಾಯಿತು ಆದರೆ ನಾವು ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ, ನಮ್ಮನ್ನು ನಾವು ತಿದ್ದಿಕೊಳ್ಳುತ್ತೇವೆ. ನಾವು ಹಿಂದಕ್ಕೆ ಸರಿಯುವುದಿಲ್ಲ. ಮತಗಳನ್ನು ಪಡೆಯದಿರುವುದು ಅಪರಾಧವಲ್ಲ. ನಾನು ಭ್ರಷ್ಟಾಚಾರ ಅಥವಾ ವಿಭಜನೀಯ ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದರು.
ಎನ್ಡಿಎ ಸರಕಾರ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದರೆ ಮತ್ತು ಸ್ವ-ಉದ್ಯೋಗ ಯೋಜನೆಯಡಿಯಲ್ಲಿ ತಲಾ 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂ.ಗಳನ್ನು ನೀಡಿದರೆ, ನಾನು ಖಂಡಿತವಾಗಿಯೂ ರಾಜಕೀಯವನ್ನು ತ್ಯಜಿಸುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಜನರು ಎನ್ಡಿಎಗೆ ಜನಾದೇಶ ನೀಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಹೆಗಲ ಮೇಲೆ ಚುನಾವಣಾ ಭರವಸೆಗಳನ್ನು ಈಡೇರಿಸುವ ಕೆಲಸ ಇದೆ. ಸ್ವಯಂ ಉದ್ಯೋಗ ಬಹಳ ಮುಖ್ಯ. ಅವರು ಭರವಸೆ ನೀಡಿದ 2 ಲಕ್ಷ ರೂ.ಗಳನ್ನು ನೀಡಬೇಕು. ಆರು ತಿಂಗಳೊಳಗೆ ಹಣ ಸಿಗದ ಜನರು ಜನ ಸುರಾಜ್ಗೆ ಬರಬಹುದು. ಅವರಿಗೆ ಮೊತ್ತ ಸಿಗುವಂತೆ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.







